ಕ್ರೀಡೆ ಮತ್ತು ದೈಹಿಕ ಕಸರತ್ತು ಪೊಲೀಸರ ನಿತ್ಯ ಬದುಕಿನ ಭಾಗ: ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.
ಮಂಗಳೂರು ನಗರ ಪೊಲೀಸ್ ಕಮಿಷನರೆಟ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ಮತ್ತು ವಿಶೇಷ ಕಾರ್ಯಪಡೆ ಘಟಕಗಳ ಮೂರು ದಿನಗಳ ವಾರ್ಷಿಕ ಕ್ರೀಡಾಕೂಟ ಗುರುವಾರ ನಗರ ಪೊಲೀಸ್ ಕವಾಯತು ಮೈದಾನದಲ್ಲಿ ಉದ್ಘಾಟಿಸಿ ಮಾತನಾಡಿದರು.
ದೈಹಿಕವಾಗಿ ಫಿಟ್ ಆಗಿದ್ದರೆ ಮಾತ್ರವೇ ಪೊಲೀಸ್ ಕೆಲಸ ಸಿಗಲು ಸಾಧ್ಯ. ಇಲಾಖೆಗೆ ಸೇರ್ಪಡೆಗೊಂಡ ಬಳಿಕವೂ ನಿತ್ಯ ದೈಹಿಕ ಕಸರತ್ತು ಮಾಡುವುದರಿಂದ ದೈಹಿಕವಾಗಿ ಸದೃಢರಾಗಲು ನೆರವಾಗುತ್ತದೆ ಎಂದ ಅವರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು. ದಾವಣಗೆರೆ ಮತ್ತು ಬೆಂಗಳೂರು ದಕ್ಷಿಣ ತಂಡಗಳ ನಡುವ ನಡೆದ ಅತ್ಯಂತ ರೋಚಕ ಫುಟ್ಬಾಲ್ ಪಂದ್ಯದಲ್ಲಿ ತಾವು ಡಿಫೆಂಡರ್ ಆಗಿದ್ದನ್ನು ನೆನಪಿಸಿಕೊಂಡರು.
ಸಭಾಕಾರ್ಯಕ್ರಮಕ್ಕೂ ಮೊದಲು ವಿವಿಧ ಪೊಲೀಸ್ ತಂಡಗಳ ಪಥ ಸಂಚಲನ, ಅತಿಥಿಗಳಿಂದ ವಂದನೆ ಸ್ವೀಕಾರ ನಡೆಯಿತು. ಉದ್ಘಾಟನೆಯ ಬಳಿಕ ಕ್ರೀಡಾ ಜ್ಯೋತಿಯ ಆಗಮನ, ಕ್ರೀಡಾ ಪ್ರಮಾಣ ವಚನ ಸ್ವೀಕಾರ ನೆರವೇರಿತು.
ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ವಿಶೇಷ ಕಾರ್ಯಪಡೆ ಪೊಲೀಸ್ ಮಹಾನಿರೀಕ್ಷಕ ಡಾ. ಎ.ಎನ್. ಪ್ರಕಾಶ್ ಗೌಡ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ., ಕಾನೂನು ಸುವ್ಯವಸ್ಥೆ ಡಿಸಿಪಿ ಸ್ಯಾಮ್ ವರ್ಗೀಸ್, ಅಪರಾಧ ಸಂಚಾರ ವಿಭಾಗದ ಡಿಸಿಪಿ ರವಿಶಂಕರ್ ಕೆ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಮಂಗಳೂರು ನಗರ ಸಶಸ್ತ್ರ ಮೀಸಲು ಪಡೆ ಡಿಸಿಪಿ ಉಮೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.