ಆಶಾ ಕಾರ್ಯಕರ್ತೆಯರ ಶಾಪ ತಟ್ಟಲಿದೆ: ಸತೀಶ್ ಕುಂಪಲ
ಮಂಗಳೂರು: ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ವಿವಿಧ ಕಡೆಯ ಸಾವಿರಾರು ಆಶಾ ಕಾರ್ಯಕರ್ತೆಯರು ಕೊರೆಯುವ ಚಳಿಯಲ್ಲಿ ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಆಹೋರಾತ್ರಿ ಧರಣಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಪ್ರತಿಭಟನೆ 5ನೇ ದಿನಕ್ಕೆ ಕಾಲಿಟ್ಟರೂ ಸರ್ಕಾರದ ಕಣ್ಣು ಇನ್ನೂ ತೆರೆದಿಲ್ಲ. ಸ್ಥಳದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಹಲವಾರು ಕಾರ್ಯಕರ್ತರು ಅನಾರೋಗ್ಯಕ್ಕೆ ಈಡಾದರೂ ಸರ್ಕಾರಕ್ಕೆ ಕನಿಕರ ಬಂದಿಲ್ಲ ಅವರ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟುವುದು ಗ್ಯಾರಂಟಿ ಎಂದು ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ದಿನನಿತ್ಯ ಬೆಲೆಯೇರಿಕೆ ಮಾಡುತ್ತಿರುವ ಸರ್ಕಾರ, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡಲು ಮೀನಮೇಷ ಮಾಡುತ್ತಿದೆ. ಸಮಯಕ್ಕೆ ಸರಿಯಾಗಿ ವೇತನ ಮತ್ತು ಬಾಕಿ ಇರುವ ಪ್ರೋತ್ಸಾಹ ಧನದ ಪಾವತಿಗಾಗಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಗಂಭೀರತೆ ಪ್ರದರ್ಶಿಸುತ್ತಿಲ್ಲ. ಬದಲಾಗಿ ಕುಮಾರಕೃಪ ಹೆಸರು ಬದಲಿಸಿ ಗಂಗಾ ನಾಮಕರಣ ಮಾಡಿ ಅದಕ್ಕಾಗಿ ನೂರಾರು ಕೋಟಿ ಖರ್ಚು ಮಾಡುತ್ತಿದೆ. ಇದು ಹೃದಯಶೂನ್ಯ ಸರ್ಕಾರ. ತಕ್ಷಣ ಅವರ ಬೇಡಿಕೆಗಳಿಗೆ ಸ್ಪಂದಿಸಬೇಕೆಂದಿದ್ದಾರೆ.