28 ಗಂಟೆಗಳ ನಿರಂತರ ಗಾಯನ:ಗಾಯಕ ಯಶ್ವಂತ್ ವಿಶ್ವದಾಖಲೆಗೆ ಸಚಿವ ಅಶ್ವಿನಿ ವೈಷ್ಣವ್ ಅಭಿನಂದನೆ
Friday, November 20, 2026
ಮೂಡುಬಿದಿರೆ: 28 ರಾಜ್ಯಗಳ 28 ಭಾಷೆಗಳ ಹಾಡುಗಳನ್ನು ಸತತ 28 ಗಂಟೆಗಳ ಕಾಲ ಹಾಡುವ ಮೂಲಕ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ನಲ್ಲಿ ಸ್ಥಾನ ಪಡೆದಿರುವ ‘ಜೀ ಕನ್ನಡ ಸರಿಗಮಪ’ ಖ್ಯಾತಿಯ ಗಾಯಕ, ಮೂಡುಬಿದಿರೆಯ ವಿದ್ವಾನ್ ಯಶವಂತ್ ಎಂ.ಜಿ. ಅವರನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇಲ್ಲಿ ಸನ್ಮಾನಿಸಿದರು.
ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಗಾಗಿ ಉಡುಪಿಗೆ ಆಗಮಿಸಿದ್ದ ಸಚಿವರು, ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಪರ್ಯಾಯ ಶಿರೂರು ಮಠದ ಶ್ರೀಪಾದರ ಆಶೀರ್ವಾದ ಪಡೆದು ಮಠದಲ್ಲಿ ಉಪಾಹಾರ ಸ್ವೀಕರಿಸಿದರು. ಇದೇ ವೇಳೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಆಹ್ವಾನದ ಮೇರೆಗೆ ಆಗಮಿಸಿದ್ದ ಯಶವಂತ್ ಅವರನ್ನು ಸಚಿವರು ಅಭಿನಂದಿಸಿದರು.
ದೇಶದ ಮೊದಲ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನೋತ್ಸವದ ಅಂಗವಾಗಿ ಯಶವಂತ್ ಅವರು ಈ ಅಪರೂಪದ ಗಾಯನ ದಾಖಲೆ ನಿರ್ಮಿಸಿದ್ದರು. ಕುಂದಾಪುರ ರೈಲ್ವೆ ಹೋರಾಟ ಸಮಿತಿಯ ತಾಂತ್ರಿಕ ವಿಭಾಗದ ಪ್ರಮುಖ ಗೌತಮ್ ಶೆಟ್ಟಿ ಅವರು ಯಶವಂತ್ ಅವರ ಈ ವಿಶಿಷ್ಟ ಸಾಧನೆಯ ಕುರಿತು ಸಚಿವರಿಗೆ ವಿವರಿಸಿದರು. ಯಶವಂತ್ ಅವರ ಪ್ರತಿಭೆಯನ್ನು ಮೆಚ್ಚಿದ ಸಚಿವರು, ಇದೊಂದು ಅದ್ಭುತ ಸಾಧನೆ ಎಂದು ಶ್ಲಾಘಿಸಿ ಶುಭ ಹಾರೈಸಿದರು.
ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಯಶ್ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರ್ ನವೀನ್ ಶೆಟ್ಟಿ, ಕುಂದಾಪುರ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಸೇರಿದಂತೆ ಹಲವು ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
