ಆಳ್ವಾಸ್ ನಲ್ಲಿ ಹೆಚ್ಐವಿ ಕುರಿತು ಜಾಗೃತಿ ಉಪನ್ಯಾಸ
Thursday, November 5, 2026
ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಕ್ಕಳ ಹಕ್ಕುಗಳ ಸಂಘದ ವತಿಯಿಂದ ಆರೋಗ್ಯಕರ ನಡವಳಿಕೆ ಹಾಗೂ ಎಚ್‌ಐವಿ ಸೋಂಕು ಕುರಿತು ಜಾಗೃತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಉತ್ತಮ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಮತ್ತು ಸಮರ್ಪಕ ವಿಶ್ರಾಂತಿ ಆರೋಗ್ಯಕರ ಜೀವನಕ್ಕೆ ಅಗತ್ಯ. ಅತಿಯಾದ ಕೊಬ್ಬು, ಸಕ್ಕರೆ, ಉಪ್ಪು ಹಾಗೂ ಫಾಸ್ಟ್‌ಫುಡ್ ಸೇವನೆ ತಪ್ಪಿಸಿ ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡಬೇಕು ಎಂದು ಉಪನ್ಯಾಸದಲ್ಲಿ ತಿಳಿಸಲಾಯಿತು.
ಎಚ್‌ಐವಿ ಸೋಂಕಿತರೊಂದಿಗೆ ಮಾತನಾಡುವುದು, ಆಹಾರ ಹಂಚಿಕೊಳ್ಳುವುದು ಅಥವಾ ಸಾಮಾನ್ಯ ಸಾಮಾಜಿಕ ಒಡನಾಟದಿಂದ ಸೋಂಕು ಹರಡುವುದಿಲ್ಲ. ಅವರೊಂದಿಗೆ ಗೌರವ ಹಾಗೂ ಸಹಾನುಭೂತಿಯಿಂದ ವರ್ತಿಸುವ ಮೂಲಕ ಸಾಮಾಜಿಕ ಕಳಂಕ ನಿವಾರಿಸಬೇಕು ಎಂದು ಪ್ರಶ್ನೋತ್ತರಗಳ ಮೂಲಕ ತಿಳಿಸಲಾಯಿತು. ಪ್ರತಿದಿನ ವ್ಯಾಯಾಮ, ಅಗತ್ಯ ನಿದ್ರೆ ಹಾಗೂ ದೇಹದ ತೂಕದ ಸಮತೋಲನ ಕಾಪಾಡಿಕೊಳ್ಳುವಂತೆ ಸಲಹೆ ನೀಡಲಾಯಿತು.
ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕಿ ಹಾಗೂ ಮಕ್ಕಳ ಸುರಕ್ಷತಾ ಸಮಿತಿಯ ಸಂಚಾಲಕಿ ಮಲ್ಲಿಕಾ ಎಂ.ಆರ್. ಉಪಸ್ಥಿತರಿದ್ದರು. ವಿದ್ಯಾರ್ಥಿ ಆಪ್ತ ಸಮಾಲೋಚಕಿ ರೇನಿಟಾ ಡಿ'ಸೋಜಾ ನಿರೂಪಿಸಿದರು.