ಸಂತ ಫಿಲೋಮಿನಾ ಕಾಲೇಜು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದೆ: ಮೈಕಲ್ ಡಿ’ಸೋಜಾ

ಸಂತ ಫಿಲೋಮಿನಾ ಕಾಲೇಜು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದೆ: ಮೈಕಲ್ ಡಿ’ಸೋಜಾ

ಸಂತ ಫಿಲೋಮಿನಾ ಪ.ಪೂ. ಕಾಲೇಜಿನ ನೂತನ ಹೆಚ್ಚುವರಿ ಕಟ್ಟಡದ ಉದ್ಘಾಟನೆ


ಪುತ್ತೂರು: ಸಂತ ಫಿಲೋಮಿನಾ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿದ್ದು, ದೇಶದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯಲ್ಲಿ ತನ್ನದೇ ಕೊಡುಗೆಯನ್ನು ನೀಡಿದೆ ಎಂದು ಸಮಾಜ ಸೇವಕ ಮತ್ತು ಉದ್ಯಮಿ ಮೈಕಲ್ ಡಿ’ಸೋಜಾ ಹೇಳಿದರು.


ಅವರು ನ.20 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ನೂತನ ಸಭಾಂಗಣದಲ್ಲಿ ನಡೆದ ನೂತನ ಹೆಚ್ಚುವರಿ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ರೆ. ಫಾ. ಪತ್ರವೋ ಇವರ ದೂರದರ್ಶಿ ಚಿಂತನೆಯ ಫಲವಾಗಿ ಈ ಕಾಲೇಜು ಜನ್ಮತಾಳಿದ್ದು, ಇಂದು ಮತ್ತಷ್ಟು ಮೂಲ ಸೌಕರ್ಯಗಳ ವಿಸ್ತರಣೆಯೊಂದಿಗೆ ಸಂಸ್ಥೆಯು ಇನ್ನಷ್ಟು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಅಣಿಯಾಗಿದೆ. ಸುಸಜ್ಜಿತ ಮೂಲ ಸೌಕರ್ಯಗಳ ವಿಸ್ತರಣೆಗೆ ಕಾರಣೀಕರ್ತರಾದ ಎಲ್ಲರನ್ನೂ ಅಭಿನಂದಿಸಿ, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.


ಇನ್ನೋರ್ವ ಮುಖ್ಯ ಅತಿಥಿ ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಷನ್ ನ ಕಾರ್ಯದರ್ಶಿ ರೆ. ಡಾ. ಪ್ರವೀಣ್ ಲಿಯೋ ಲಸ್ರದೋ ಮಾತನಾಡಿ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಕಳೆದ ಹಲವಾರು ದಶಕಗಳಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಿದೆ. ಇಂದು ಬದಲಾದ ಪರಿಸ್ಥಿತಿಯಲ್ಲಿ ಮೂಲ ಸೌಕರ್ಯಗಳ ವಿಸ್ತರಣೆಯನ್ನು ಮನಗಂಡು ದಾನಿಗಳ ಸಹಾಯದಿಂದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಉತ್ತಮ ಸೌಕರ್ಯಗಳನ್ನು ನಿರ್ಮಿಸಿದ್ದೇವೆ. ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಷನ್(ಅಃಇ)ನ ಉಪಾಧ್ಯಕ್ಷ ಮೊನ್ಸಿಂಜೋರ್ ಮ್ಯಾಕ್ಸಿಮ್ ಎಲ್. ನೋರೋನ್ಹ ಮಾತನಾಡಿ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಬೆಳವಣಿಗೆಗಳು ತುಂಬಾ ಸಂತೋಷವನ್ನು ನೀಡುತ್ತಿದ್ದು, ಇಂದು ವಿದ್ಯಾರ್ಥಿಗಳಿಗೆ ನೀಡಿದ ಹೆಚ್ಚುವರಿ ಸೌಲಭ್ಯಗಳು ಸಂಸ್ಥೆಯ ಬೆಳವಣಿಗೆಗೆ ಹಿಡಿದ ಕನ್ನಡಿಯಾಗಿದೆ. ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯನ್ನು ಅಭಿನಂದಿಸಿ, ಮುಂದಿನ ದಿನಗಳಲ್ಲೂ ಕಾಲೇಜು ಉತ್ತಮ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಲಿ ಎಂದು ಆಶಿಸಿದರು.

ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೆ. ಡಾ. ಜಾನ್ ಬ್ಯಾಪ್ಟಿಸ್ಟ್ ಸಲ್ದಾನ್ಹಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕಟ್ಟಡ ಕಾಮಗಾರಿಯ ಮೇಲ್ವಿಚಾರಣೆಯನ್ನು ನಿರ್ವಹಿಸಿದ ಓಸ್ವಾಡ್ಡ್ ಲೂಯಿಸ್ ಹಾಗೂ ಜೋಸೆಫ್ ಸೆರವೋರನ್ನು ಸನ್ಮಾನಿಸಲಾಯಿತು.

ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ರೋಷನ್ ಲಾಸ್ರಾದೋ, ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಅಂಟೋನಿ ಒಲಿವೆರಾ, ಪ.ಪೂ. ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಪ್ರಕಾಶ್ ಬಿ., ಸಂತ ಫಿಲೋಮಿನಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಯರಾದ ರೆ. ಫಾ. ಮ್ಯಾಕ್ಸಿಮ್ ಡಿ’ಸೋಜಾ, ಮಾಯಿದೆ ದೇವುಸ್ ಚರ್ಚ್‌ನ ಸಹಾಯಕ ಪ್ಯಾರಿಸ್ ಧರ್ಮ ಗುರುಗಳಾದ ರೆ.ಫಾ. ಮಾರ್ವಿನ್ ಪ್ರವೀಣ್ ಲೋಬೋ ಹಾಗೂ ಚ್ಯಾರಿಟಿ ಟೀಮ್‌ನ ಸದಸ್ಯರಾದ ಸ್ಟೀಫನ್ ಪಿಂಟೋ, ಓಸ್ವಾಲ್ಡ್ ರೋಡ್ರಿಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿವಿಧ ಸಂಸ್ಥೆಗಳ ಮುಖ್ಯಸ್ಥರು, ದಾನಿಗಳು, ಗಣ್ಯರು, ಬೋಧಕ ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ನೂತನ ಕಟ್ಟಡದಲ್ಲಿ ವಿಸ್ತೃತ ಸಭಾಂಗಣ, ವಿಜ್ಞಾನ ಪ್ರಯೋಗಾಲಯಗಳು, ಉಪನ್ಯಾಸಕರ ಕೊಠಡಿಗಳು, ತರಗತಿ ಕೋಣೆಗಳು ಹಾಗೂ ಸುಸಜ್ಜಿತ ಶೌಚಾಲಯಗಳು ವಿಧ್ಯಾರ್ಥಿಗಳ ಉಪಯೋಗಕ್ಕೆ ಲಭ್ಯವಿದೆ.

ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಸ್ವಾಗತಿಸಿದರು. ಉಪನ್ಯಾಸಕರಾದ ಸುಮಾ ಡಿ. ವಂದಿಸಿ, ಡಾ. ಆಶಾ ಸಾವಿತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article