Chikkamagaluru: ಸಿದ್ದರಹಳ್ಳಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ರಥಕ್ಕೆ ಸ್ವಾಗತ
ಚಿಕ್ಕಮಗಳೂರು: ಸಂವಿಧಾನ ಜಾಗೃತಿ ಜಾಥಾವು ಫೆಬ್ರವರಿ 11 ಮತ್ತು 12 ರಂದು ತರೀಕೆರೆ ತಾಲ್ಲೂಕಿನಲ್ಲಿ ಸಂಚರಿಸುತ್ತಿದ್ದು, ತರೀಕೆರೆ ತಾಲ್ಲೂಕಿನ ಸಿದ್ದರಹಳ್ಳಿ, ಅಮೃತಾಪುರ, ಹಾದಿಕೆರೆ, ನೇರಲೆಕೆರೆ, ಹುಣಸೆಘಟ್ಟ, ಕೋರನಹಳ್ಳಿ, ಬೆಟ್ಟದಹಳ್ಳಿ ಮತ್ತು ತರೀಕೆರೆ ತಾಲ್ಲೂಕು ಪುರಸಭೆ ವ್ಯಾಪ್ತಿಯಲ್ಲಿ ಸಂಚರಿಸಿತು.
ಪ್ರಥಮವಾಗಿ ಸಿದ್ದರಹಳ್ಳಿ ಗ್ರಾಮ ಪಂಚಾಯತಿಗೆ ಆಗಮಿಸಿದ ಜಾಗೃತಿ ರಥ ಯಾತ್ರೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ದಲಿತ ಮುಖಂಡರು, ಶಿಕ್ಷಕರು, ಶಾಲಾ ಮಕ್ಕಳು, ಅಂಗನವಾಡಿ ಸಿಬ್ಬಂದಿಗಳು, ಸ್ವಸಹಾಯ ಸಂಘಗಳು, ಸ್ತೀ ಶಕ್ತಿ ಸಂಘದ ಸದಸ್ಯರುಗಳು ಮತ್ತು ಸಾರ್ವಜನಿಕರು ಸಂಭ್ರಮದಿಂದ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ, ಪುಷ್ಪಾರ್ಚನೆ ಮಾಡಿದರು.
ಶಾಲಾ ಮಕ್ಕಳು, ಛದ್ಮವೇಷಧಾರಿಗಳು, ಗ್ರಾಮಸ್ಥರು, ಶಾಲಾ ಮಕ್ಕಳು ವಿವಿಧ ವೇಷ ಭೂಷಣಗಳೊಂದಿಗೆ, ಬೈಕ್ ರ್‍ಯಾಲಿ, ವಿದ್ಯಾರ್ಥಿಗಳು ಡ್ರಂಸೆಟ್ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವೀರಗಾಸೆ ಕುಣಿತ, ತಮಟೆ ವಾದ್ಯ, ಡೊಳ್ಳು ಕುಣಿತ ಆಕರ್ಷಕವಾಗಿತ್ತು. ನಂತರ ಪಟ್ಟಣ ಪಂಚಾಯತ್ ಸದಸ್ಯರು ಸಂವಿಧಾನ ಪೀಠಿಕೆ ಭೋದಿಸಲಾಯಿತು. ಕೊರನಹಳ್ಳಿ ಶಾಲಾ ಮಕ್ಕಳು ಕಿರುನಾಟಕ ಹಾಗೂ ಭೀಮಾ ಹಾಡನ್ನು ಹಾಡಿದರು. ಬೆಟ್ಟದಹಳ್ಳಿ ಗ್ರಾಮ ಪಂಚಾಯತ್ ಶಿಕ್ಷಕರು ಸಂವಿಧಾನ ಹೇಗೆ ರಚನೆ ಆಯಿತು, ರಚನೆಯಲ್ಲಿ ಪಟ್ಟ ಶ್ರಮ, ದೇಶ ದೇಶಗಳಿಂದ ಹುಡುಕಾಟ ನಡೆಸಿ ಒಳ್ಳೆಯ ಅಂಶಗಳನ್ನು ತಂದು ಆಳವಡಿಸಿಕೊಂಡಿರುವ ಬಗ್ಗೆ ವಿವರವಾಗಿ ತಿಳಿಸಿದರು ಹಾಗೂ ತರೀಕೆರೆ ಶಾಸಕ ಶ್ರೀನಿವಾಸ್ ಅವರು ಸಂವಿಧಾನದ ರಚನೆ, ಅದರಲ್ಲಿರುವ ಹಕ್ಕುಗಳು ಮತ್ತು ಹಕ್ಕುಗಳ ಪಾಲನೆ ಬಗ್ಗೆ ವಿವರವಾಗಿ ಮಾತನಾಡಿದರು.
