Mangalore: ಮಾ.2: ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ‘ಹೊಂಬೆಳಕು’ ಕಾರ್ಯಕ್ರಮ
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸ್ಥಳೀಯಾಡಳಿತ ಸಂಸ್ಥೆ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿಗಳಿಗಾಗಿ ಮಾರ್ಚ್ 2 ರಂದು ನಗರದ ಹೊರವಲಯದ ಅಡ್ಯಾರ್ನಲ್ಲಿರುವ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ‘ಹೊಂಬೆಳಕು’ ಏರ್ಪಡಿಸಲಾಗಿದೆ ಎಂದು ಗ್ರಾಮ ಸ್ವರಾಜ್ ಟ್ರಸ್ಟ್ ಗೌರವಾಧ್ಯಕ್ಷ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಕಾರ್ಯಕ್ರಮದ ಭಿತ್ತಿಪತ್ರ ಅನಾವರಣಗೊಳಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಸ್ವರಾಜ್ ಟ್ರಸ್ಟ್ ಮತ್ತು ಸ್ಥಳೀಯಾಡಳಿತಗಳ ಜಂಟಿ ಆಶ್ರಯದಲ್ಲಿ ಸ್ಪರ್ಧೆಗಳು ನಡೆಯಲಿವೆ. ಉಭಯ ಜಿಲ್ಲೆಗಳ ಎಲ್ಲ ಸ್ಥಳೀಯಾಡಳಿತ ಸಂಸ್ಥೆ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಸರ್ಕಾರ ಸುತ್ತೋಲೆಯ ಮೂಲಕ ಅನುಮತಿ ನೀಡಿದೆ. ಪಂಚಾಯತ್ರಾಜ್ ಹಾಗೂ ನಗರಾಡಳಿತದ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿಗೆ ಸ್ವಲ್ಪ ನಿರಾಳತೆ ಒದಗಿಸುವುದು ಮತ್ತು ಅವರ ನಡುವೆ ಪರಸ್ಪರ ಸೌಹಾರ್ದ ಸಂಬಂಧಗಳನ್ನು ಬೆಳೆಸುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದ ದಿನ ಬೆಳಗ್ಗೆ ಆಕರ್ಷಕ ಪಥಸಂಚಲನ ನಡೆಯಲಿದೆ. ಅತ್ಯುತ್ತಮ ಪಥ ಸಂಚಲನ ನಡೆಸಿದ ಗುಂಪುಗಳಿಗೆ ಪ್ರಥಮ 50 ಸಾವಿರ ರೂ, ದ್ವಿತೀಯ 25 ಸಾವಿರ ರೂ. ಹಾಗೀ ತೃತೀಯ 10 ಸಾವಿರ ರೂ ನಗದು ಬಹುಮಾನ ವಿತರಿಸಲಾಗುವುದು. ಪಥ ಸಂಚಲನದಲ್ಲಿ ಉಭಯ ಜಿಲ್ಲೆಗಳ ಶಾಸಕರು, ಇತರ ಮುಖ್ಯ ಅತಿಥಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಕ್ರೀಡಾಕೂಟದಲ್ಲಿ ಮಹಿಳೆಯರು ಮತ್ತು ಪ್ರತ್ಯೇಕ ಗುಂಪು ಹಾಗೂ ವೀಯುಕ್ತಿಕ ವಿಭಾಗಗಳಲ್ಲಿ ಸ್ಪರ್ಧಿಸಲು ಅವಕಾಶವಿದೆ. ಸುಮಾರು 5,000 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಭಾಗವಹಿಸುವ ಸಂಸ್ಥೆಗಳು ಫೆಬ್ರವರಿ 28 ಒಳಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ನಿಗದಿತ ದಿನದ ಬಳಿಕ ನೋಂದಣಿ ಅವಕಾಶ ಇರುವುದಿಲ್ಲ. ಆನ್ಲೈನ್ ಮೂಲಕ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಸಮಾರಂಭದ ಭಿತ್ತಿಪತ್ರವನ್ನು ಈ ಸಂದರ್ಭ ಬಿಡುಗಡೆ ಮಾಡಲಾಯಿತು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿ ಗೌರವ ಸಲಹೆಗಾರರಾದ ಹರೀಶ್ ಕುಮಾರ್ ಕೆ., ಗ್ರಾಮ ಸ್ವರಾಜ್ ಟ್ರಸ್ಟ್ ಅಧ್ಯಕ್ಷ ಕೆ.ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಲಾರೆನ್ಸ್ ಡಿಸೋಜ, ಖಜಾಂಚಿ ಪ್ರವೀಣ್ಚಂದ್ರ ಆಳ್ವ ಉಪಸ್ಥಿತರಿದ್ದರು.