Mangalore: ಕರಾವಳಿಗರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲಿದ್ದಾರೆ

Mangalore: ಕರಾವಳಿಗರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲಿದ್ದಾರೆ


ಮಂಗಳೂರು: ಕರಾವಳಿ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ವ್ಯಾಪಾರ ವಹಿವಾಟುಗಳು ಕುಸಿದಿವೆ. ಇಲ್ಲಿ ಮಕ್ಕಳು ವಿದ್ಯಾಭ್ಯಾಸದಿಂದ ದೂರ ಉಳಿಯುತ್ತಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಆದ್ದರಿಂದ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕರಾವಳಿ ಭಾಗದ ಜನ ಬದಲಾವಣೆ ಮಾಡುವ ವಿಶ್ವಾಸವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ರಾಜ್ಯ ಮಟ್ಟದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ಡಿ.ಕೆ. ಶಿವಕುಮಾರ್, ಕಾರ್ಯಕರ್ತರ ಸಮಾವೇಶ ಮಂಗಳೂರಿನಲ್ಲಿ ನಡೆಸುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು.

ರಾಜಕೀಯದಲ್ಲಿ ಯಾವುದೂ ಶಾಶ್ವತವಿಲ್ಲ. ಅಸಾಧ್ಯ ಎಂಬುದಿಲ್ಲ. ರಾಜಕಾರಣ ಎಂದರೆ ಸಾಧ್ಯತೆಗಳ ಕಲೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಜನ ಇಲ್ಲಿ ಬದಲಾವಣೆ ಮಾಡಲಿದ್ದಾರೆ ಎಂಬ ನಂಬಿಕೆ ಇದೆ. ಈ ಭಾಗದಲ್ಲಿ ನಿರುದ್ಯೋಗದ ಸಮಸ್ಯೆ ಇದೆ. ಇಲ್ಲಿ ಪಾಸಾಗುವ ಯುವಕರು ಮತ್ತು ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಬೆಂಗಳೂರು, ಮುಂಬೈ, ಸೌದಿಗೆ ಹೋಗುತ್ತಿದ್ದಾರೆ.

ಈ ಭಾಗದಲ್ಲಿ ಶಾಂತಿ ಕದಡಲಾಗುತ್ತಿದೆ. ಈ ಭಾಗದಲ್ಲಿ ಅನೇಕ ಮೆಡಿಕಲ್, ಇಂಜಿನಿಯರ್ ಕಾಲೇಜುಗಳಿವೆ. ಅನೇಕ ಮಕ್ಕಳು ಇಲ್ಲಿ ಬಿಜೆಪಿಯ ಧರ್ಮದ ಬಲೆಗೆ ಬಿದ್ದು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಬಿಜೆಪಿ ಅಭಿವೃದ್ಧಿ ವಿಚಾರ ಬಿಟ್ಟು ಭಾವನಾತ್ಮಕ ವಿಚಾರವನ್ನು ಮುಂದಿಡುತ್ತಿದೆ. ಅದಕ್ಕಾಗಿ ನಾವು ನಮ್ಮ ಪ್ರಣಾಳಿಕೆಯಲ್ಲಿ ಹೊಸ ಆಲೋಚನೆ ಮಾಡುವುದಾಗಿ ಹೇಳಿದ್ದೆವು. ನಿನ್ನೆಯ ಬಜೆಟ್‌ನಲ್ಲೂ ಮೀನುಗಾರರು ಹಾಗೂ ಕರಾವಳಿ ಭಾಗದಲ್ಲಿ ಹೊಸ ನೀತಿ ತರಲು ಘೋಷಣೆ ಮಾಡಿದ್ದೇವೆ. ಈ ವಿಚಾರವಾಗಿ ಸಲಹೆ ಕೇಳಲಾಗಿದೆ. ಈ ಭಾಗದಲ್ಲಿ ಉದ್ಯೋಗ ಸೃಷ್ಟಿಸಬೇಕಾಗಿದೆ. ಸಂಜೆ ೭ ಗಂಟೆ ನಂತರ ಈ ಭಾಗದ ಪ್ರದೇಶದಲ್ಲಿ ಜನ ಓಡಾಟ ಕಡಿಮೆ ಮಾಡಿದ್ದಾರೆ. ವ್ಯಾಪಾರ ವಹಿವಾಟು ಕುಂಠಿತವಾಗಿದೆ. ವ್ಯಾಪಾರ ವಹಿವಾಟು ಆದಾಗಲೇ ಜನಕ್ಕೆ ಉದ್ಯೋಗ ಸಿಗುತ್ತದೆ. ಈ ಭಾಗದ ಬ್ಯಾಂಕುಗಳನ್ನು ಉತ್ತರ ಭಾರತದ ಬ್ಯಾಂಕುಗಳ ಜತೆ ವಿಲೀನ ಮಾಡಲಾಗುತ್ತಿದೆ. ಇವೆಲ್ಲದರ ಬಗ್ಗೆ ನಾವು ಗಂಭೀರವಾಗಿ ಗಮನಹರಿಸಬೇಕು ಎಂದರು.

ದಕ್ಷಿಣ ಕನ್ನಡ ಭಾಗದ ತೆರಿಗೆ ನಮಗೆ ಬೇಕು ಎಂಬ ಶಾಸಕ ಹರೀಶ್ ಪೂಂಜಾ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಹೇಳಿದಾಗ ಅವರು ಧ್ವನಿ ಎತ್ತಲಿಲ್ಲ. ಮುಸ್ಲಿಮರಿಗೆ ಶೇ.೧ರಷ್ಟು ಅನುದಾನವನ್ನೂ ನೀಡಬಾರದೇ? ಬಿಜೆಪಿಯವರು ರಾಜಕಾರಣ ಮಾಡಲಿಕ್ಕೆ ಈ ರೀತಿ ಹೇಳುತ್ತಾರೆ ಎಂದರು.

ಡಿ.ಕೆ.ಸುರೇಶ್ ವಿರುದ್ಧ ಮೈತ್ರಿ ಅಭ್ಯರ್ಥಿಯಾಗಿ ಡಾ. ಮಂಜುನಾಥ್ ಅವರನ್ನು ನಿಲ್ಲಿಸಲು ಚರ್ಚೆ ನಡೆಯುತ್ತಿರುವ ಬಗ್ಗೆ ಕೇಳಿದಾಗ, ನಾನು ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿದ್ದೆ. ಕುಮಾರಸ್ವಾಮಿಯವರ ವಿರುದ್ಧವೂ ಸ್ಪರ್ಧಿಸಿದ್ದೆ. ಬಿಜೆಪಿ ಹಾಗೂ ಜೆಡಿಎಸ್ ಸೇರಿ ಕುಮಾರಸ್ವಾಮಿ ಅವರ ಧರ್ಮಪತ್ನಿ ಅವರನ್ನು ನಿಲ್ಲಿಸಿದಾಗ ಅವರ ವಿರುದ್ಧ ನನ್ನ ತಮ್ಮ ಸ್ಪರ್ಧೆ ಮಾಡಿದ್ದರು. ಆಗಲೂ ೧.೩೫ ಲಕ್ಷ ಮತಗಳಿಂದ ಗೆದ್ದಿದ್ದೆವು. ಅವರು ಯಾರನ್ನಾದರೂ ನಿಲ್ಲಿಸಲಿ. ನಮಗೆ ನಮ್ಮ ಮತದಾರರಿದ್ದಾರೆ.

ಸುರೇಶ್ ಅವರು ದಿಲ್ಲಿಯಲ್ಲಿ ಕೂರುವ ಸಂಸದರಲ್ಲ. ಅವರು ಹಳ್ಳಿಯಲ್ಲಿ ಕೂರುವ ಸಂಸದರು. ಅವರು ಮತದಾರರ ಮನಸ್ಸಿನಲ್ಲಿ ಉತ್ತಮ ಕೆಲಸಗಾರ ಎಂಬ ಭಾವನೆ ಮೂಡಿಸಿದ್ದಾರೆ. ನಮ್ಮ ಕ್ಷೇತ್ರದಿಂದ ದೇವೇಗೌಡರು, ಕುಮಾರಸ್ವಾಮಿ ಅವರೂ ಸೇರಿದಂತೆ ಅನೇಕ ಬೇರೆ ಸಂಸದರೂ ಆಯ್ಕೆಯಾಗಿದ್ದರು. ಅವರಿಗೂ ಸುರೇಶ್ ರಿಗೂ ಏನು ವ್ಯತ್ಯಾಸವಿದೆ ಎಂದು ಜನ ನೋಡಿದ್ದಾರೆ. ಪ್ರತಿ ಹಳ್ಳಿ, ಪ್ರತಿ ಪಂಚಾಯ್ತಿ, ಪ್ರತಿ ರಸ್ತೆ, ಪ್ರತಿ ಮನೆ ಸುರೇಶ್ ಅವರ ಕೆಲಸ ನೋಡಿದೆ. ಇಂದು ಆ ಭಾಗದಲ್ಲಿ ಕೆರೆಗಳು ತುಂಬಿ ಅಂತರ್ಜಲ ಹೆಚ್ಚಳವಾಗಿದ್ದರೆ, ಬಡವರಿಗೆ ಮನೆ, ನಿವೇಶನ ನೀಡಿದ್ದರೆ, ನರೇಗಾದಲ್ಲಿ ಹಣ ಬಂದಿದ್ದರೆ ಅದು ಸುರೇಶ್ ಅವರ ಕೊಡುಗೆ ಇದೆ. ಮತದಾರರು ಪ್ರಜ್ಞಾವಂತರು. ಅವರು ಯಾರನ್ನೇ ನಿಲ್ಲಿಸಿದರೂ ಮತದಾರರು ಉತ್ತರ ಕೊಡುತ್ತಾರೆ.

ನನ್ನ ವಿರುದ್ಧ ಚಕ್ರವರ್ತಿ ಅಶೋಕ್ ಕೂಡ ಸ್ಪರ್ಧಿಸಿದ್ದರು. ರಾಜಕಾರಣ ಎಂದರೆ ಜನ ತೀರ್ಮಾನ ಮಾಡುತ್ತಾರೆ. ನಾವು ಯಾಕೆ ಚಿಂತಿಸಬೇಕು. ಕುಮಾರಸ್ವಾಮಿ ಬಂದು ನಿಂತರೂ ನಾವು ಸ್ವಾಗತಿಸುತ್ತೇವೆ ಎಂದು ತಿಳಿಸಿದರು.

ಲೋಕಸಭೆ ಅಭ್ಯರ್ಥಿ ಆಯ್ಕೆ ಕುರಿತಾದ ಪ್ರಶ್ನೆಗೆ, ಈಗಾಗಲೇ ಮೂರ್ನಾಲ್ಕು ಬಾರಿ ಚರ್ಚೆ ಮಾಡಿದ್ದು, ಮತ್ತೊಂದು ಸುತ್ತಿನ ಸಮೀಕ್ಷೆ ನಡೆಯುತ್ತಿದೆ. ಎಲ್ಲ ಮುಗಿದ ನಂತರ ಅಭ್ಯರ್ಥಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

ಜೆರೋಸಾ ಶಾಲೆ ವಿವಾದದಲ್ಲಿ ಶಾಸಕರ ವಿರುದ್ಧದ ಪ್ರಕರಣ ಹಿಂಪಡೆಯದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂಬ ಬಿಜೆಪಿ ಹೇಳಿಕೆ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಡಿಕೆಶಿ, ಅವರು ಮಾಡುತ್ತಿರಲಿ. ಕಾನೂನಿನ ಪ್ರಕಾರ ಕ್ರಮ ವಹಿಸಲಾಗುತ್ತದೆ. ಪೊಲೀಸರು ಅವರ ಕೆಲಸ ಮಾಡುತ್ತಾರೆ. ನಾನು ಅವರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article