Moodubidire: ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಸೊಸೈಟಿಗೆ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಭೇಟಿ
ಮೂಡುಬಿದಿರೆ: ಮರವೊಂದು ವಿಶಾಲವಾಗಿ ವಿಸ್ತರಿಸಿ ಬೆಳೆದಾಗ ಅದರ ನೆರಳೂ ವಿಸ್ತಾರವಾಗುತ್ತದೆ. ತಂಪು ವಿಸ್ತರಿಸಿ ಹಣ್ಣು ಹಂಪಲು ಎಲ್ಲವೂ ಅಭಿವೃಧ್ಧಿಯಾಗುತ್ತದೆ. ೧೦೮ ವರ್ಷಗಳ ಬೆಳವಣಿಗೆಯ ಇತಿಹಾಸವಿರುವ ಸೊಸೈಟಿ ರಾಷ್ಟ್ರೀಕೃತ ಬ್ಯಾಂಕುಗಳನ್ನೂ ಮೀರಿ ಜನತೆ ಬೇಡಿಕೆ ಮತ್ತು ಭರವಸೆಯಿಂದ ವಿಶ್ವಾಸವಿರಿಸಿ ಬೆಳೆಸಿದ್ದಾರೆ. ಇದೊಂದು ಸಿಂಹದ ಮರಿಯಿದ್ದಂತೆ. ಎಲ್ಲರನ್ನೂ ಸೇರಿಸಿಕೊಂಡು ಮುನ್ನಡೆಯುವ ಈ ಸೊಸೈಟಿಯ ಆದರ್ಶ ಅನುಕರಣೀಯ. ಈ ಸಂಸ್ಥೆ ಅಳಿವಿಲ್ಲದ ಆಲದಮರದಂತಾಗಲಿ ಎಂದು ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ನುಡಿದರು.
ಅವರು ರವಿವಾರ ಅಪರಾಹ್ನ ಇಲ್ಲಿನ ಮೂಡುಬಿದಿರೆ ಕೊ ಅಪರೇಟಿವ್ ಸರ್ವೀಸ್ ಸೊಸೈಟಿಗೆ ಅನುಗ್ರಹ ಭೇಟಿ ನೀಡಿ ಆಶೀರ್ವಚನ ನೀಡಿದರು.
ಸೊಸೈಟಿಗೆ ಚಿತ್ತೈಸಿದ ಶ್ರೀಗಳವರನ್ನು ಅಧ್ಯಕ್ಷ ಬಾಹುಬಲಿ ಪ್ರಸಾದ್, ಉಪಾಧ್ಯಕ್ಷ ಗಣೇಶ್ ನಾಯಕ್ ಸಹಿತ ವಿಶೇಷ ಕರ್ತವ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಧಾರ್ಮಿಕ ಗೌರವಾದರಪೂರ್ವಕ ಬರಮಾಡಿಕೊಂಡರು.
ಬಳಿಕ ಸೊಸೈಟಿ ವತಿಯಿಂದ ಶ್ರೀಗಳವರನ್ನು ಗೌರವಿಸಲಾಯಿತು.
ಬಾಹುಬಲಿ ಪ್ರಸಾದ್ ಸ್ವಾಗತದ ಮಾತುಗಳನ್ನಾಡಿ, ಪೇಜಾವರ ಶೃಂಗೇರಿ, ಶ್ರವಣಬೆಳಗೊಳ, ಎಡನೀರು, ಪುತ್ತಿಗೆ ಹೀಗೆ ನಿರಂತರ ಹಲವು ಮಠಾಧಿಪತಿಗಳು ಸೊಸೈಟಿಗೆ ಚಿತ್ತೈಸಿ ಆಶೀರ್ವದಿಸಿರುವುದು ಸಂಸ್ಥೆಯ ಬೆಳವಣಿಗೆಗೆ ಕಾರಣವಾಗಿದೆ. ರಾಘವೇಶ್ವರ ಭಾರತೀ ಶ್ರೀಗಳವರು ಗೋ ತಳಿಗಳ ಸಂರಕ್ಷಣೆಗೆ ಒತ್ತು ನೀಡಿ ಮಾಡುತ್ತಿರುವ ಸೇವಾ ಕಾರ್ಯಗಳಲ್ಲಿ ಮೂರು ಬಾರಿ ಮೂಡುಬಿದಿರೆಯಲ್ಲೂ ಶ್ರೀಗಳವರ ಕರೆಗೆ ಸ್ಪಂದಿಸಿ ಗೋರಥ ಯಾತ್ರೆಯನ್ನು ಸಂಘಟಿಸಿದ್ದನ್ನು ಸ್ಮರಿಸಿಕೊಂಡರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸಹಿತ ಸೊಸೈಟಿಯ ನಿರ್ದೇಶಕರುಗಳು, ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಕೆ. ರಘುವೀರ ಕಾಮತ್, ರಜನೀ ಕುಮಾರ್, ಸಹಿತ ಸಿಬಂದಿವರ್ಗ, ಉದ್ಯಮಿ ಕೆ. ಶ್ರೀಪತಿ ಭಟ್, ವಿಶ್ರಾಂತ ಪ್ರಾಧ್ಯಾಪಕ ಡಾ.ಪುಂಡಿಕಾಯ್ ಗಣಪಯ್ಯ ಭಟ್, ನ್ಯಾಯವಾದಿ ಮನೋಜ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.