ಶಿರಿಯಾರದಲ್ಲಿ ಮನೆಯಂಗಳಕ್ಕೆ ಬಂದ ಚಿರತೆ: ಭಯಗೊಂಡ ಜನತೆ
Wednesday, September 25, 2024
ಕುಂದಾಪುರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಶಿರಿಯಾರದ ನೈಲಾಡಿಯಲ್ಲಿ ಚಿರತೆಯೊಂದು ಮನೆಯ ಅಂಗಳಕ್ಕೆ ನುಗ್ಗಿ ಸಾಕು ನಾಯಿಯನ್ನು ಹೊತ್ತೊಯ್ದ ಘಟನೆ ಸೆ.೨೫ ರಂದು ಮುಂಜಾನೆ ನಡೆದಿದೆ.
ನೈಲಾಡಿ ಸದಾಶಿವ ಕುಲಾಲ್ ಅವರ ಮನೆಯ ಅಂಗಳಕ್ಕೆ ಬಂದ ಚಿರತೆಯೊಂದು ಮನೆಯ ಸಾಕು ನಾಯಿಯನ್ನು ಕ್ಷಣಾರ್ಧದಲ್ಲಿ ಹೊತ್ತುಕೊಂಡು ಹೋಗಿದ್ದು ಇದನ್ನು ಕಂಡು ಮನೆಯವರು ಭಯಭೀತರಾಗಿದ್ದಾರೆ. ರಾಜಾರೋಷವಾಗಿ ಅಂಗಳ ಪ್ರವೇಶಿಸಿದ ಚಿರತೆ ನಾಯಿಯನ್ನು ಹೊತ್ತುಕೊಂಡು ಹೋಗುವ ದ್ರಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಪ್ರದೇಶದಲ್ಲಿ ಬಹುಸಮಯದಿಂದಲೂ ಚಿರತೆಗಳ ಕಾಟ ವಿಪರೀತವಾಗಿದ್ದು, ಜನರಲ್ಲಿ ಭೀತಿ ಹುಟ್ಟಿಸಿದೆ. ಸಾರ್ವಜನಿಕರು ರಾತ್ರಿ ಸಂಚರಿಸುವುದೇ ಕಷ್ಟಕರವಾಗಿದೆ. ಇದರ ಬಗ್ಗೆ ಅರಣ್ಯ ಇಲಾಖೆಯವರು ಕೂಡಲೇ ಗಮನಹರಿಸಿ ಬೊನನ್ನು ಇಟ್ಟು ಚಿರತೆ ಹಿಡಿಯುವಂತೆ ಜನರು ಆಗ್ರಹಿಸಿದ್ದಾರೆ.