ರೇಬೀಸ್ ಜಾಗೃತಿ ಕರಪತ್ರ ಬಿಡುಗಡೆ: ಶ್ವಾನಗಳಿಗೆ ಉಚಿತ ರೇಬಿಸ್ ಲಸಿಕಾ ಶಿಬಿರ
ಶಿರ್ವ: ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕಾಪು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಶಿರ್ವ ಗ್ರಾಮ ಪಂಚಾಯತ್, ಪಶುಚಿಕಿತ್ಸಾಲಯ ಶಿರ್ವ ಇದರ ವತಿಯಿಂದ ನಾಗರಿಕ ಸಮಿತಿ(ರಿ) ಬಂಟಕಲ್ಲು ಇದರ ನೇತೃತ್ವ ಹಾಗೂ ಲಯನ್ಸ್‌ಕ್ಲಬ್ ಬಂಟಕಲ್ಲು ಜಾಸ್ಮಿನ್, ರೋಟರಿ ಕ್ಲಬ್ ಶಿರ್ವ ಇವರ ಸಹಭಾಗಿತ್ವದಲ್ಲಿ ‘ವಿಶ್ವ ರೇಬೀಸ್ ದಿನಾಚರಣೆ ಮತ್ತು ರೇಬೀಸ್ ಮಾಸಾಚರಣೆ’ ಪ್ರಯುಕ್ತ ಬುಧವಾರ ಬಂಟಕಲ್ಲು ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಿದ ‘ರೇಬೀಸ್ ಜಾಗೃತಿ-ಕರಪತ್ರ ಬಿಡುಗಡೆ ಹಾಗೂ ಶ್ವಾನಗಳಿಗೆ ಉಚಿತ ರೇಬೀಸ್ ಲಸಿಕಾ ಶಿಬಿರ’ವನ್ನು ಶಿರ್ವ ಗ್ರಾಮ ಪಂ. ಅಭಿವೃದ್ಧಿ ಅಧಿಕಾರಿ ಪದ್ಮನಾಭ ನಾಯಕ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ, ಬೀದಿನಾಯಿಗಳ ಕಾಟ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಸಾಕು ನಾಯಿಗಳೇ ಬೀದಿನಾಯಿಗಳಾಗಿ ರೇಬೀಸ್ ಹರಡುವಿಕೆಗೆ ಕಾರಣವಾಗುತ್ತವೆ ಎಂದರು.
ಪಶುಚಿಕಿತ್ಸಾಲಯ ಶಿರ್ವ ಇದರ ವೈದ್ಯಾಧಿಕಾರಿ ಡಾ. ಅರುಣ್ ಕುಮಾರ್ ಹೆಗ್ಡೆ ರೇಬೀಸ್ ಮಾಹಿತಿ ನೀಡಿ, ಗುಣಪಡಿಸಲಾಗದ ಈ ಕಾಯಿಲೆ ಬರದಂತೆ ಮುಂಜಾಗ್ರತೆ ವಹಿಸುವುದು ಅತೀ ಅಗತ್ಯವಾಗಿದ್ದು, ಸಮಯೋಚಿತ ಚಿಕಿತ್ಸೆಯಿಂದ ಮಾತ್ರ ಈ ಭಯಾನಕ ಕಾಯಿಲೆಯನ್ನು ತಡೆಗಟ್ಟಬಹುದು ಎಂದರು. ಕಾಪು ಪಶುವೈದ್ಯಕೀಯ ಆಸ್ಪತ್ರೆಯ ಜಾನುವಾರು ಅಧಿಕಾರಿ ಗಿರೀಶ್, ಹಿರಿಯ ಪಶುವೈದ್ಯಕೀಯ ಪರಿವೀಕ್ಷಕರುಗಳಾದ ಶಿವಪುತ್ರಯ್ಯ ಗುರುಸ್ವಾಮಿ, ವಸಂತ ಮಾದಾರ, ಪಶುವೈದ್ಯಕೀಯ ಪರಿವೀಕ್ಷಕ ಶರಣ ಪಾಟೀಲ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟಕಲ್ಲು ನಾಗರಿಕ ಸಮಿತಿಯ ಅಧ್ಯಕ್ಷ ಕೆ.ಆರ್. ಪಾಟ್ಕರ್ ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
ವೇದಿಕೆಯಲ್ಲಿ ಶಿರ್ವ ರೋಟರಿ ಅಧ್ಯಕ್ಷ ಆಲ್ವಿನ್ ಅಮಿತ್ ಅರಾನ್ಹಾ, ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಅಧ್ಯಕ್ಷೆ ಅನಿತಾ ಮೆಂಡೋನ್ಸಾ, ನಾಗರಿಕ ಸಮಿತಿಯ ವಿನ್ಸೆಂಟ್ ಕಸ್ತಲಿನೊ ಪಲ್ಕೆ, ವಾಲೆಟ್ ಕಸ್ತಲಿನೊ, ರೋಟರಿ ಸದಸ್ಯರಾದ ರಿಚ್ಚಾರ್ಡ್ ಪೌಲ್ ಫೆರಾವೊ, ಅಂಗನವಾಡಿ ಶಿಕ್ಷಕಿ ವಿನಯಾ ಕುಂದರ್, ಶ್ವಾನಗಳ ಪೋಷಕರು ಉಪಸ್ಥಿತರಿದ್ದರು.