
ಗ್ರಾಹಕರ ಸೋಗಿನಲ್ಲಿ ಶೋರೂಮ್ಗೆ ಬಂದು ಬೈಕ್ ಸಮೇತ ಪರಾರಿಯಾದ ಯುವಕ
ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬದಲ್ಲಿರುವ ಬೈಕ್ ಶೋ ರೂಮ್ ಒಂದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದ ಯುವಕನೋರ್ವ ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್ ಸಹಿತ ನಾಪತ್ತೆಯಾದ ಘಟನೆ ನಡೆದಿದೆ.
ಯಮಹಾದ ಬೈಕ್ ಶೋರೂಮ್ಗೆ ಬಂದು ಆರ್ 15ವಿ3 ಯಮಾಹಾ ಬೈಕ್ ಇದೆಯಾ? ಎಂದು ಕೇಳಿದ್ದಾನೆ. ಆಗ ಸಿಬ್ಬಂದಿಗಳು ಈ ಬೈಕ್ ಇಲ್ಲ ಆರ್15ವಿ4 ಇದೆ ಎಂದು ಹೇಳಿದ್ದಾರೆ. ಆಗ ಯುವಕ ಬೈಕ್ನ ಟೆಸ್ಟ್ ಡ್ರೈವ್ ಕೇಳಿದ್ದು, ಶೋರೂಮ್ನ ಮನೇಜರ್ ಅವರ ಕೈಯಿಂದ ಕೀ ಕಿತ್ತುಕೊಂಡು ಅಲ್ಲಿದ್ದ ನೀಲಿ ಬಣ್ಣದ ಆರ್15ವಿ4 ತೆಗೆದುಕೊಂಡು ಹೋಗಿದ್ದಾನೆ.
ಆದರೆ ಹಲವು ಸಮಯ ಕಳೆದರೂ ಆತ ವಾಪಾಸು ಬಾರದೇ ಇದ್ದಾಗ ಸಿಬ್ಬಂದಿಗೆ ಅನುಮಾನ ಬಂದಿದೆ. ಅಪರಿಚಿತ ಯುವಕ ಬೈಕ್ ಸಮೇತ ಮಂಗಳೂರು ಕಡೆ ಪ್ರಯಾಣಿಸಿದ್ದಾನೆಂದು ತಿಳಿದು ಬಂದಿದೆ. ಈ ಬೈಕ್ನ ಮೌಲ್ಯ 1,88 ಲಕ್ಷ ರೂ. ಆಗಿದ್ದು, ಅಪರಿಚಿತ ಯುವಕ ಪ್ಯಾಂಟ್ ಮತ್ತು ಶರ್ಟ್ನ್ನು ಧರಿಸಿದ್ದು, ಸುಮಾರು 20-25 ವಯಸ್ಸಿನವನಾಗಿದ್ದಾನೆನ್ನಲಾಗಿದೆ, ಕುರುಚಲು ಗಡ್ಡವು ಇದೆ. ಈ ಬಗ್ಗೆ ಅಶ್ವಥ್ ಎಂಬವರ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.