
ನ.2ರಂದು ಮಂಗಳೂರು ಯುವ ದಸರಾ
Thursday, October 31, 2024
ಮಂಗಳೂರು: ಸ್ಯಾಂಡೀಸ್ ಕಂಪನಿ ಪ್ರಾಯೋಜಕತ್ವದಲ್ಲಿ ಎರಡನೇ ವರ್ಷದ ಮಂಗಳೂರು ಯುವ ದಸರಾ-2024 ಸ್ಟಾರ್ ಮ್ಯೂಸಿಕಲ್ ನೈಟ್ ನ.2 ರಂದು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ದೀಪಾವಳಿ ಸಂಭ್ರಮದೊಂದಿಗೆ ಆಯೋಜಿಸಲಾಗಿದೆ ಎಂದು ಪಠ್ಯಕ್ರಮ ರೂವಾರಿ, ಶಾಸಕ ಎ. ಉಮಾನಾಥ ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ, ಚಲನಚಿತ್ರ ರಂಗದ ಪ್ರಮುಖರಾದ ತರುಣ್ ಸುಧೀರ್, ಸೋನಲ್ ಮೊಂತೇರೊ, ಸುಪ್ರಿಯಾ ರಾಮ್, ಐಶ್ವರ್ಯ ರಂಗರಾಜನ್, ನಿಶಾನ್ ರೈ, ಪೃಥ್ವಿ ಅಂಬರ್, ರೂಪೇಶ್ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಸ್ಯಾಂಡೀಸ್ ಕಂಪನಿ ಮಾಲೀಕ ಸಂದೇಶ್ ರಾಜ್ ಬಂಗೇರ ಹೇಳಿದರು.
ಸಿಝಲಿಂಗ್ ಗೈಸ್ ಡ್ಯಾನ್ಸ್ ಸ್ಟುಡಿಯೋದಿಂದ ನೃತ್ಯ ವೈಭವ, ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಲಿದ್ದು, ಈ ಬಾರಿಯ ಮಂಗಳೂರು ಯುವ ದಸರಾ ಸನ್ಮಾನವನ್ನು ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅವರಿಗೆ ನೀಡಲಾಗುವುದು ಎಂದರು.
ಸಂಘಟಕರಾದ ತಿಲಕ್ ಆಚಾರ್ಯ, ಅಮ್ಯ, ಶ್ರೇಯ ಮತ್ತು ಶಾನ್ ಪುತ್ತೂರು, ಸಾತ್ವಿಕ್ ಪೂಜಾರಿ ಉಪಸ್ಥಿತರಿದ್ದರು.