
ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಪ್ರಕರಣದಲ್ಲಿ ವಿದೇಶಿ ಪ್ರಜೆ ಸೇರಿ 6 ಆರೋಪಿಗಳ ಸೆರೆ
ಮಂಗಳೂರು: ಮಂಗಳೂರು ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಣಿಜ್ಯ ಪ್ರಮಾಣದ ಮಾದಕ ವಸ್ತುವನ್ನು ಮಾರಾಟ ಮತ್ತು ಸಾಗಾಟ ಮಾಡಿದ ಆರೋಪಿತರನ್ನು ಪಣಂಬೂರು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಮಾದಕ ವಸ್ತು ಮತ್ತು ಸ್ಕೂಟರನ್ನು ಸ್ವಾಧೀನಪಡಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಚಂದನ್, ಶರತ್, ಮಧುಸೂಧನ ಕೊಂಚಾಡಿ, ಧನುಷ್ ಆಕಾಶ್ ಭವನ, ಮುಖೇಶ್ ದೇರೆಬೈಲ್ ಮತ್ತು ನೈಜಿರಿಯಾ ದೇಶದ ಪ್ರಜೆ ಮೈಕಲ್ ಬಾಲಾಜಿ ಯಾನೆ ಅಝಬೈಕ್ ಜಾನಿ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ 11 ಗ್ರಾಂ ಕೋಕೇನ್ ಮತ್ತು ಪ್ಯಾಕೇಟ್ ಸಮೇತ 30 ಗ್ರಾಂ ತೂಕದ ಎಂಡಿಎಂಎ 91,000 ರೂ.ಗಳಷ್ಟು ಮೌಲ್ಯದ ಮಾದಕ ವಸ್ತು, ಸ್ಕೂಟರ್, ಮತ್ತು ೯ ಮೊಬೈಲ್‌ಗಳನ್ನು ಸ್ವಾಧೀನಪಡಿಸಲಾಗಿದೆ.
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆಐಓಸಿಎಲ್ ಹಿಂಬಾಗದ ಸಮುದ್ರ ಕಡೆ ಹೋಗುವ ಮಾರ್ಗದಲ್ಲಿ ಇಬ್ಬರು ಯುವಕರು ಸ್ಕೂಟರ್ ನಿಲ್ಲಿಸಿಕೊಂಡು ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪಣಂಬೂರು ಠಾಣಾ ಪಿಎಸ್‌ಐ ಶ್ರೀಕಲಾ ಕೆ.ಟಿ. ಅವರಿಗೆ ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯಂತೆ ಶ್ರೀಕಲಾ ಕೆ.ಟಿ. ಅವರ ತಂಡ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿತರ ಪೈಕಿ 5 ಮಂದಿ ಮಂಗಳೂರಿನ ನಿವಾಸಿಗಳಾಗಿದ್ದು, ಒಬ್ಬ ಆರೋಪಿ ನೈಜೀರಿಯಾ ದೇಶದವನಾಗಿರುತ್ತಾನೆ. ಆರೋಪಿಗಳೆಲ್ಲರೂ ಕ್ಯಾಟರಿಂಗ್, ಪೈಂಟಿಂಗ್ ಸೇರಿದಂತೆ ಖಾಸಗಿ ಕೆಲಸ ಮಾಡಿಕೊಂಡಿದ್ದು, ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಪತ್ತೆ ಕಾರ್ಯಚರಣೆಯಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಅವರ ಮಾರ್ಗದರ್ಶನಂದಂತೆ, ಡಿಸಿಪಿಗಳಾದ ಸಿದ್ದಾರ್ಥ ಗೋಯಲ್, ದಿನೇಶ್ ಕುಮಾರ್ ಅವರ ನಿರ್ದೇಶನದಂತೆ, ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕ ಮೊಹಮ್ಮದ್ ಸಲೀಂ ಅಬ್ಬಾಸ್ ಅವರ ನೇತೃತ್ವದಲ್ಲಿ ಉಪ ನಿರೀಕ್ಷಕಿ ಶ್ರೀಕಲಾ ಕೆ.ಟಿ. ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳಾದ ಹೆಚ್.ಸಿ.ಗಳಾದ ಪ್ರೇಮಾನಂದ, ಸತೀಶ್ ಎಮ್.ಆರ್., ಸಯ್ಯದ್ ಇಂತಿಯಾಜ್, ಚೆರಿಯನ್ ಕೆ, ಜೇಮ್ಸ್, ಸಿಪಿಸಿಗಳಾದ ಶಶಿಕುಮಾರ್, ರಾಕೇಶ್ ಎಲ್.ಎಮ್., ಮಂಜುನಾಥ ಹಾಗೂ ಮಂಗಳೂರು ನಗರ ಉತ್ತರ ಉಪ ವಿಭಾಗದ ಆಂಟಿ ಡ್ರಗ್ ಸ್ವಾಡ್‌ನ ಪಿಎಸ್‌ಐ ರಾಘವೇಂದ್ರ ಎಮ್. ನಾಯ್ಕ ಮತ್ತು ಸಿಬ್ಬಂದಿಗಳಾದ ಸುನೀಲ್ ಹೆಚ್.ಎಮ್., ವಿನಾಯಕ್, ಬಸವರಾಜ್ ಅವರು ಭಾಗವಹಿಸಿದ್ದರು.