
ಒಂದು ದೇಶ-ಒಂದು ಚುನಾವಣೆ ಪಕ್ಕಕ್ಕಿಡಿ ಶ್ರಮ ಜೀವಿಗಳಿಗೆ ಒಂದೇ ರೀತಿಯ ವೇತನ ನೀಡಿ: ಕೆ. ಮಹಾಂತೇಶ್
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರೇ ನೀವು ಒಂದು ದೇಶ ಒಂದು ಚುನಾವಣೆಯನ್ನು ಪಕ್ಕಕ್ಕಿಡಿ. ತಾಕತ್ತಿದ್ದರೆ ಜನರನ್ನು ಬೆಲೆ ಏರಿಕೆಯಿಂದ ಕಾಪಾಡಿ. ಶ್ರಮ ಜೀವಿಗಳಿಗೆ ಒಂದೇ ರೀತಿಯ ವೇತನ ನೀಡಿ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ (ಸಿಪಿಐಎಂ) ರಾಜ್ಯ ಸಮಿತಿ ಸದಸ್ಯ ಕೆ. ಮಹಾಂತೇಶ್ ಸವಾಲೆಸೆದಿದ್ದಾರೆ.
ಅವರು ಅ.27 ರಂದು ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐಎಂ) ಮಂಗಳೂರು ನಗರ ದಕ್ಷಿಣ ಸಮ್ಮೇಳನದ ಭಾಗವಾಗಿ ಉರ್ವಸ್ಟೋರ್‌ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿ, ಒಂದೇ ದೇಶ ಒಂದೇ ಚುನಾವಣೆ ದೇಶಕ್ಕೆ ದೊಡ್ಡ ಹೊರೆ. ಒಂದೇ ಬಾರಿಗೆ ಚುನಾವಣೆ ಹೇಗೆ ಸಾಧ್ಯ. ಮಂಗಳೂರಿನ ಜನರ ಸ್ಥಳೀಯ ಸಮಸ್ಯೆ ಬೇರೆ, ಲಕ್ನೋ ಜನರ ಸ್ಥಳೀಯ ಸಮಸ್ಯೆ ಬೇರೆ ಅಲ್ಲವೇ ಎಂದು ಪ್ರಶ್ನಿಸಿದರು.
ನಾನು ಈ ಪ್ರದೇಶದಲ್ಲೇ ಅದೆಷ್ಟೋ ಕೂಲಿ ಕಾರ್ಮಿಕರನ್ನು ನೋಡಿದೆ. ತಮ್ಮ ಊರಿನಲ್ಲಿ ಉದ್ಯೋಗ ಇಲ್ಲದೆ ಇಲ್ಲಿ ಬಂದು ದುಡಿಯುತ್ತಿದ್ದಾರೆ. ಆದರೆ ಅವರಿಗೆ ಮನೆ ಇಲ್ಲ. ಇಲ್ಲೇ ಮೈದಾನದಲ್ಲಿ ಮಲಗುತ್ತಾರೆ. ದುಡಿದು ಊರಿಗೆ ಹಣ ಕಳಿಸುತ್ತಾರೆ. ಅವರಿಗೆ ಯಾವ ಸುರಕ್ಷತೆಯೂ ಇಲ್ಲ. ಹೀಗೆ ಬೆಂಗಳೂರು, ಇತರೆ ನಗರಗಳಲ್ಲಿಯೂ ಕಾರ್ಮಿಕರ ಸ್ಥಿತಿ ಹೀಗೆಯೇ ಇದೆ ಎಂದರು.
ಇತ್ತೀಚೆಗೆ ಗುಜರಾತ್‌ನಲ್ಲಿ ನಕಲಿ ಜಡ್ಜ್ ಒಬ್ಬರನ್ನು ಬಂಧಿಸಿದರು. ಅಲ್ಲೇ ನಕಲಿ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಅದೇ ರಾಜ್ಯದವರು. ಮೋದಿ ಟೀ ಮಾರಿದ್ದರು ಎಂದು ಹೇಳುತ್ತಾರೆ, ಆದರೆ ಅವರು ಟೀ ಮಾರಿದ ರೈಲ್ವೆ ಸ್ಟೇಷನ್ ಇಲ್ಲ. ಮೋದಿ ಡಿಗ್ರಿ ಪಡೆದ ಕಾಲೇಜು ಇಲ್ಲ, ಅವರ ಸ್ನೇಹಿತರು ಕೂಡಾ ಇಲ್ಲ. ನಮ್ಮ ದೇಶದ ಪ್ರಧಾನಿ ಕೂಡಾ ನಕಲಿ. ನಾವು ನಕಲಿಗಳ ದೇಶದಲ್ಲಿ ಇದ್ದೇವೆ ಎಂದು ಕುಟುಕಿದರು.
ಈಗ ಲಕ್ಷಾಂತರ ರೂ. ಹಣ ಕೊಟ್ಟು ವಿಧ್ಯಾಭ್ಯಾಸ ಮಾಡಿದರೂ ಉದ್ಯೋಗ ಸಿಗಲ್ಲ. ಉದ್ಯೋಗ ಸಿಕ್ಕರೂ ಅದು ರಾತ್ರಿ ಪಾಳಿಯ ಕೆಲಸ ಆಗಿರುತ್ತದೆ. ನಾವು ನಮ್ಮ ಮಕ್ಕಳಿಗೆ ನೈಟ್ ಶಿಫ್ಟ್ ಎಂದು ಹೆಮ್ಮೆಯಿಂದ ಹೇಳುತ್ತೇವೆ. ಆದರೆ ಅದರಿಂದ ಆಗುವ ಆರೋಗ್ಯ ಸಮಸ್ಯೆ ನಮಗೆ ತಿಳಿದಿಲ್ಲ. ನಿದ್ದೆ ಇಲ್ಲದೆ, ಸರಿಯಾಗಿ ಆಹಾರ ಸೇವಿಸದೇ ಹೃದಯಾಘಾತ ಸಣ್ಣ ವಯಸ್ಸಿನವರಿಗೂ ಆಗುತ್ತಿದೆ ಎಂದರು.
ನಮ್ಮದು ಪ್ರಜಾಪ್ರಭುತ್ವ ಪಕ್ಷ. ಇಲ್ಲಿ ಎಲ್ಲವೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯುತ್ತದೆ. ಬಂಡವಾಳಶಾಹಿ ಪಕ್ಷಗಳಂತೆ ನಮ್ಮ ಪಕ್ಷವಲ್ಲ. ಬಿಜೆಪಿಯಿಂದ ಕಾಂಗ್ರೆಸ್, ಕಾಂಗ್ರೆಸ್‌ನಿಂದ ಬಿಜೆಪಿಗೆ ಹಾರಿ ಟೆಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಅಂತಹ ಆಯ್ಕೆ ನಮ್ಮಲ್ಲಿಲ್ಲ. ಇಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಪಕ್ಷದ ಬೋರ್ಡು ಮಾತ್ರ ಬೇರೆ ಇದೆ. ನೀತಿಯಲ್ಲಿ ವ್ಯತ್ಯಾಸವಿಲ್ಲ. ನಾವು ಅನಿವಾರ್ಯವಾಗಿ ಜನರನ್ನು ವಿಭಜಿಸುವ ಬಿಜೆಪಿಯನ್ನು ಸೋಲಿಸಲು ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದೆವು. ಹಾಗಂತ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಬೆಂಬಲಿಸುತ್ತೇವೆ ಎಂದಲ್ಲ. ನಾವು ಅದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ದೇಶದಲ್ಲಿ ಮೃತದೇಹವನ್ನು ಕೂಡಾ ಬಂಧನ ಮಾಡುವ ಊರು ಇದ್ದರೆ ಅದು ಮಂಗಳೂರು ಆಗಿದೆ. ಇಲ್ಲಿ ನಾಯಿಕೊಡೆಗಳಂತೆ ಅಲ್ಲಲ್ಲಿ ತಲೆ ಎತ್ತಿರುವ ಆಸ್ಪತ್ರೆಗಳು ಲಕ್ಷಾಂತರ ರೂ. ದರೋಡೆ ಮಾಡುತ್ತಾರೆ ಎಂದು ಹೇಳಿದರು.
ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯರು ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಿಪಿಐಎಂ ಮಂಗಳೂರು ದಕ್ಷಿಣ ಸಮಿತಿ ಸದಸ್ಯ ಯೋಗೀಶ್ ಜಪ್ಪಿನಮೊಗರು ಸ್ವಾಗತ ಭಾಷಣ ಮಾಡಿದರು. ವೇದಿಕೆಯಲ್ಲಿ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ ಯಾದವ್ ಶೆಟ್ಟಿ, ಪದ್ಮಾವತಿ ಶೆಟ್ಟಿ, ನೂತನ ಮಂಗಳೂರು ನಗರ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸಿಪಿಐಎಂ ಮಂಗಳೂರು ಸಮಿತಿ ಸದಸ್ಯರು ಸಂತೋಷ್ ಬಜಾಲ್ ಕಾರ್ಯಕ್ರಮ ನಿರ್ವಹಿಸಿದರು.