
ವಿಧಾನ ಪರಿಷತ್ ಉಪಚುನಾವಣೆ: ಶಾಸಕ ಕಾಮತ್ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪ್ರಮುಖರ ಸಭೆ
Thursday, October 17, 2024
ಮಂಗಳೂರು: ವಿಧಾನ ಪರಿಷತ್‌ನ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿ ಮಂಗಳೂರು ವಿಧಾನಸಭಾ ಕ್ಷೇತ್ರದ (ಉಳ್ಳಾಲ) ತಲಪಾಡಿ ಹಾಗೂ ಕಿನ್ಯ ಗ್ರಾಮ ಪಂಚಾಯತ್ ಸದಸ್ಯರ ಹಾಗೂ ಪ್ರಮುಖರ ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಭಾಗವಹಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಜಲಜೀವನ್ ಮಿಶನ್ ಮೂಲಕ ಪ್ರತಿ ಮನೆಗೂ ಕುಡಿಯುವ ನೀರು, ದೀನ್ ದಯಾಳ್ ಗ್ರಾಮ ಜ್ಯೋತಿ ಯೋಜನೆಯ ಮೂಲಕ ಗ್ರಾಮಗಳ ಮನೆಮನೆಗೂ ವಿದ್ಯುತ್ ಹೀಗೆ ಸರ್ವ ರೀತಿಯಲ್ಲೂ ಗ್ರಾಮ ಸ್ವರಾಜ್ಯಕ್ಕೆ ಚೈತನ್ಯ ತುಂಬಿದ್ದು ಪ್ರಧಾನಿ ನರೇಂದ್ರ ಮೋದಿಜಿ ನೇತೃತ್ವದ ಬಿಜೆಪಿ ಸರ್ಕಾರ. ಹಿಂದಿನ ಎಲ್ಲಾ ಅಂಕಿ ಅಂಶಗಳನ್ನು ಗಮನಿಸಿದಾಗ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡಿ ಆ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯಕ್ಕೆ ಮನ್ನಣೆ ನೀಡಿದೆ. ಹಾಗಾಗಿಯೇ ಎಲ್ಲರ ನೆಚ್ಚಿನ ಆಯ್ಕೆ ಬಿಜೆಪಿಯಾಗಿದ್ದು ಈಗಿನ ಕಾಂಗ್ರೆಸ್ ಸರಕಾರದ ಮೇಲೆ ಯಾರಿಗೂ ಎಳ್ಳಷ್ಟೂ ನಂಬಿಕೆಯಿಲ್ಲ. ನಮ್ಮ ಪಕ್ಷದ ಅಭ್ಯರ್ಥಿ ಕಿಶೋರ್ ಕುಮಾರ್ ಅವರು ಅತಿ ಹೆಚ್ಚು ಅಂತರದಿಂದ ಗೆಲ್ಲಲಿದ್ದಾರೆ, ಆ ಮೂಲಕ ಪಂಚಾಯತ್ ಸದಸ್ಯರ ಭರವಸೆಯಾಗಲಿದ್ದಾರೆ ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರ ಸಹಿತ ಅನೇಕ ಪ್ರಮುಖರು ಉಪಸ್ಥಿತರಿದ್ದರು.