ಮಂಗಳೂರು ವಿ.ವಿ.ಯ ಅತಿಥಿ ಉಪನ್ಯಾಸಕರ ನೇಮಕವಾಗದೆ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಕೆ ತೊಡಕು: ಡಾ. ಎಸ್.ಆರ್. ಹರೀಶ್ ಆಚಾರ್ಯ

ಮಂಗಳೂರು ವಿ.ವಿ.ಯ ಅತಿಥಿ ಉಪನ್ಯಾಸಕರ ನೇಮಕವಾಗದೆ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಕೆ ತೊಡಕು: ಡಾ. ಎಸ್.ಆರ್. ಹರೀಶ್ ಆಚಾರ್ಯ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸರಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಆಗದೆ ಶೈಕ್ಷಣಿಕ ಕಾರ್ಯಗಳು ಇನ್ನೂ ಸರಿಯಾಗಿ ಪ್ರಾರಂಭವಾಗಿಲ್ಲ. ಆಗಸ್ಟ್ 12 ರಿಂದ ಪದವಿ ತರಗತಿಗಳು ಪ್ರಾರಂಭವಾಗಿದ್ದರೂ ಅತಿಥಿ ಉಪನ್ಯಾಸಕರ ನೇಮಕಾತಿಯಾಗದೆ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯ ನಷ್ಟವಾಗಿದೆ ಎಂದು ಅತಿಥಿ ಉಪನ್ಯಾಸಕರ ಸಂಘದ ಗೌರವ ಅಧ್ಯಕ್ಷ ಹಾಗೂ ಮಂಗಳೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಡಾ. ಎಸ್.ಆರ್. ಹರೀಶ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಖಾಸಗಿ ಕಾಲೇಜುಗಳಲ್ಲಿ ಪಾಠ ಪ್ರವಚನಗಳು ಸಹಜವಾಗಿ ನಡೆಯುತ್ತಿದ್ದು ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಇದರಿಂದ ತೀವ್ರ ಆತಂಕಿತರಾಗಿದ್ದಾರೆ. ಆದುದರಿಂದ ಸರಕಾರ ತಕ್ಷಣವೇ ಉಪನ್ಯಾಸಕರ ನೇಮಕಾತಿ ಮಾಡುವುದರೊಂದಿಗೆ ತಕ್ಷಣವೇ ನಷ್ಟ ಹೊಂದಿದ ಸುಮಾರು 45 ದಿನಗಳ ಶೈಕ್ಷಣಿಕ ಕಾರ್ಯಗಳನ್ನು ಸರಿದೂಗಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ. 
ಒಂದು ಸೆಮಿಸ್ಟರ್‌ನ ಸುಮಾರು 90 ಶೈಕ್ಷಣಿಕ ದಿನಗಳಲ್ಲಿ 45ರಷ್ಟು ದಿನಗಳ ಶೈಕ್ಷಣಿಕ ಕಾರ್ಯದ ನಷ್ಟವನ್ನು ಸರಿದೂಗಿಸುವುದು ಸುಲಭದ ಸಂಗತಿಯಲ್ಲ. ಈ ದಿನಗಳಲ್ಲಿ ವಿದ್ಯಾರ್ಥಿಗಳ ಶಿಸ್ತು ಕಾಪಾಡಿಕೊಂಡು ಕಾಲೇಜು ಪರಿಸರದಲ್ಲಿಯೇ ಇಟ್ಟುಕೊಳ್ಳುವ ಅನಿವಾರ್ಯತೆ ಒಂದೆಡೆ ಪ್ರಾಂಶುಪಾಲರದ್ದಾದರೆ, ಇನ್ನೊಂದೆಡೆ ವಿದ್ಯಾರ್ಜನೆಗೆಂದು ಕಾಲೇಜಿಗೆ ಕಳುಹಿಸಿದ ಪೋಷಕರು ತಮ್ಮ ಮಕ್ಕಳು ಶೈಕ್ಷಣಿಕ ಕಾರ್ಯಗಳಿಲ್ಲದೆ ದಾರಿ ತಪ್ಪುವ ಆತಂಕದಲ್ಲಿದ್ದಾರೆ. ಇದು ಕೇವಲ ಈ ಶೈಕ್ಷಣಿಕ ಸಾಲಿನ ಸಂಗತಿ ಮಾತ್ರವಲ್ಲ. ಕಳೆದ ಶೈಕ್ಷಣಿಕ ಸಾಲಿನಲ್ಲಿಯೂ ಈ ರೀತಿ ಅತಿಥಿ ಉಪನ್ಯಾಸಕರ ನೇಮಕಾತಿಯಾಗದೆ ಸರಕಾರಿ ಕಾಲೇಜು ವಿದ್ಯಾರ್ಥಿಗಳು ಶೈಕ್ಷಣಿಕ ನಷ್ಟವನ್ನು ಅನುಭವಿಸಿದ್ದಾರೆ. ಸರಕಾರ ಹಿಂದಿನ ನಿರ್ಲಕ್ಷ್ಯ ಧೋರಣೆ ಮತ್ತೆ ಈ ಸಾಲಿನಲ್ಲಿ ಮುಂದುವರೆದಿದೆ. ಇದು ದೇಶದ ಅಪೂರ್ವ ಮಾನವ ಸಂಪನ್ಮೂಲವನ್ನು ನಿರ್ಮಾಣ ಮಾಡುವ ಜವಾಬ್ದಾರಿಯನ್ನೂ ಹೊಂದಿರುವ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಹಿಡಿದ ಕೈಗನ್ನಡಿಯಾಗಿದೆ. ಇದು ಅತ್ಯಂತ ನೋವಿನ ಹಾಗೂ ದುರ್ದೈವದ ಸಂಗತಿಯಾಗಿದೆ ಎಂದು ಹರೀಶ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article