
ಸಂಜೀವ ಕಾಣಿಯೂರು ವಿರುದ್ಧ ಕುಣಿತ ಭಜನೆಯ ಹೆಣ್ಣು ಮಕ್ಕಳಿಂದ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು
ಮೂಡುಬಿದಿರೆ: ಬಿಲ್ಲವ ಮಹಿಳೆಯರನ್ನು ಅವಮಾನಿಸಿ ಕುಣಿತ ಭಜನೆ ಮಾಡುವ ಹೆಣ್ಣು ಮಕ್ಕಳ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿದ್ದ ಪುತ್ತೂರು ವಲಯ ಕಾಣಿಯೂರು ಅರಣ್ಯಾಧಿಕಾರಿ ಸಂಜೀವ ಕಾಣಿಯೂರು ವಿರುದ್ಧ ಭಜಕರು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಯನ್ನು ಉದ್ಯೋಗದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ಮೂಡುಬಿದಿರೆ ಪೊಲೀಸ್ ಠಾಣೆಗೆ ಭಜನೆಯ ಕಾರ್ಯಕರ್ತರು ಪ್ರತಿಭಟನಾ ರೂಪವಾಗಿ ದೂರನ್ನು ನೀಡಿದರು.
ಮಹಿಳೆಯರ ಬಗ್ಗೆ ಮತ್ತು ಕುಣಿತ ಭಜನೆ ಮಾಡುವ ಮಕ್ಕಳ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದ ಅರಣ್ಯ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಆತನ ಮಾತುಗಳಿಂದ ಸಂಸ್ಕೃತಭರಿತವಾದ ಭಜನೆಯ ಭಜಕರಿಗೆ ನೋವಾಗಿದೆ. ಇದು ಇಡಿಯ ಹಿಂದೂ ಸಮಾಜಕ್ಕೆ ಆದ ನೋವು. ಭಜನೆ ಎನ್ನುವುದು ಭಗವಂತನನ್ನು ಒಲಿಸುವ ಸನ್ಮಾರ್ಗವಾಗಿದೆ ಇಂತಹ ಮಾತುಗಳಿಂದ ಮುಂದಿನ ದಿನಗಳಲ್ಲಿ ಅಶಾಂತಿ ನಿರ್ಮಿಸುವ ಹುನ್ನಾರವಾಗಿದೆ ಎಂದು ಮೂಡುಬಿದಿರೆ ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಲಕ್ಷ್ಮಣ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂರಕ್ಕಿಂತಲೂ ಅಧಿಕ ಕುಣಿತ ಭಜನೆಯ ಮಕ್ಕಳು ಹಾಗೂ ಮಹಿಳೆಯರು ಪೊಲೀಸ್ ಠಾಣೆಗೆ ಆಗಮಿಸಿ ತಮ್ಮ ನೋವನ್ನು ವ್ಯಕ್ತಪಡಿಸಿ ದೂರು ನೀಡಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಸುಚೇತನ್ ಜೈನ್, ಹಿಂದೂ ಜಾಗರಣ ವೇದಿಕೆಯ ಮುಖಂಡರಾದ ಸಮಿತ್ ರಾಜ್ ದರಗುಡ್ಡೆ, ಬಜರಂಗದಳ ಸಂಘಟನೆಯ ಮುಖಂಡರಾದ ಪ್ರವೀಣ್ ಬೋರಗುಡ್ಡೆ, ಅವಿನಾಶ್, ಕುಣಿತ ಭಜನೆಯ ತರಬೇತುದಾರರಾದ ಅಶೋಕ್ ನಾಯಕ್, ವಿಜಯ್ ನೀರ್ಕೆರೆ, ಲಕ್ಷ್ಮಣ್ನಾಯ್ಕ್, ಅಕ್ಷಯ್ ಸಾವ್ಯ, ಹಾಗೂ ಭಜನಾ ಪರಿಷತ್ತಿನ ವಲಯಾಧ್ಯಕ್ಷರುಗಳು ಸಹಿತ ಅಸಂಖ್ಯ ಭಜನಾ ಕಾರ್ಯಕರ್ತರು ಹಿಂದೂ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.