
ಸಂತ ಫಿಲೋಮಿನಾ ಕಾಲೇಜ್(ಸ್ವಾಯತ್ತ)ನಲ್ಲಿ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭ
ಪುತ್ತೂರು: ಅ.18 ರಂದು ಸಂತ ಫಿಲೋಮಿನಾ ಕಾಲೇಜ್( ಸ್ವಾಯತ್ತ)ನಲ್ಲಿ ಆಯೋಜಿಸಲಾದ ವನ್ಯಜೀವಿ ಸಪ್ತಾಹದ ಸಮಾರೋಪದಲ್ಲಿ ಒಂದು ದಿನದ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವು ಅ.1 ರಿಂದ ಅ.4ರ ವರೆಗೆ ನಡೆದ ವನ್ಯಜೀವಿ ಸಪ್ತಾಹದ ಒಂದು ಭಾಗವಾಗಿದೆ. ಈ ಕಾರ್ಯಕ್ರಮವನ್ನು ವನ್ಯಜೀವಿ ಸಂರಕ್ಷಣೆ ಪರಿಸರ ಸಂರಕ್ಷಣೆಯನ್ನು ಉತ್ತೇಜಿಸುವ ಮತ್ತು ಗೌರವಿಸುವ ಉದ್ದೇಶದಿಂದ ಸಂತ ಫಿಲೋಮಿನಾ ಕಾಲೇಜ್ (ಸ್ವಾಯತ್ತ)ನ ಸಸ್ಯಾಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗದ ಸಹಕಾರದೊಂದಿಗೆ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್ ಅವರು ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಪರಿಸರದ ಉಳಿವಿನ ಬಗ್ಗೆ ಅರಿವು ಮೂಡಬೇಕಾದರೆ ಹಲವಾರು ಪರಿಸರವಾದಿಗಳ ಹಾಗೂ ಅವರ ಲೇಖನಗಳನ್ನು ಓದಬೇಕು. ಪರಿಸರದ ಒಡನಾಡಿಯಾಗಿ ಬಾಳಿದಲ್ಲಿ ಮುಂದಿನ ಪೀಳಿಗೆ ಸಮೃದ್ಧವಾಗಿ ಬಾಳಬಹುದು ಎಂದು ಸೂಚಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಕಾಲೇಜು ಶಿಕ್ಷಣ ಇಲಾಖೆಯ ಸಸ್ಯಶಾಸ್ತ್ರದ ಪ್ರಾಧ್ಯಾಪಕ ಗಣೇಶ್ ವಿ. ಶೆಂಡ್ಯೆ ಮಾತನಾಡಿ, ವನ್ಯಜೀವಿಗಳಿಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದದೊಂದಿಗೆ ತಮ್ಮ ಉಪನ್ಯಾಸವನ್ನು ಪ್ರಾರಂಭಿಸಿದ ಅವರು ವನ್ಯಜೀವಿ ಸಂರಕ್ಷಣೆಯಲ್ಲಿ ಕಾಡುಗಳ ಮತ್ತು ನದಿಗಳ ಪಾತ್ರದ ಬಗ್ಗೆ ಒಳನೋಟವನ್ನು ಬೀರಿದರು. ಸಸ್ಯ ಮತ್ತು ಪ್ರಾಣಿಯ ಸಹಬಾಳ್ವೆ, ಭೂಮಿಯ ನಿಸ್ವಾರ್ಥತೆ, ಮನುಷ್ಯನ ಸ್ವಾರ್ಥ, ಪರಿಸರ ನಾಶದಿಂದಾಗುವ ಕೆಡುಕುಗಳ ಬಗ್ಗೆ ಬೆಳಕು ಚೆಲ್ಲಿದರು.
ಅದಕ್ಕೆ ಪೂರಕವಾಗಿ ಮಾಹಾತ್ಮಾ ಗಾಂಧೀಜಿ ಅವರು ಹೇಳಿದಂತೆ ಭೂಮಿಯೂ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಒದಗಿಸುತ್ತದೆ ಆದರೆ ಪ್ರತಿಯೊಬ್ಬ ಮನುಷ್ಯನ ದುರಾಸೆಯನ್ನು ಪೂರೈಸುವುದಿಲ್ಲ ಎಂಬ ಸಂದೇಶವನ್ನು ನೀಡಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ, ನಾವು ಹುಟ್ಟಿನ ಮೊದಲು ಇದ್ದ ಪರಿಸರ ನಾವು ಅಳಿಯುವ ಮುನ್ನ ಅಳಿಯದಿರಲಿ ಎಂಬ ಜಾಗ್ರತಾ ಭಾವವನ್ನು ಮೂಡಿಸಿದರು.
ಈ ಸಂದರ್ಭದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಮಾಲಿನಿ ಕೆ. ಮತ್ತು ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದ ಮುಖ್ಯಸ್ಥೆ ಶಶಿಪ್ರಭಾ ಮತ್ತು ಶ್ರೀರಕ್ಷ ಬಿ.ವಿ. ಹಾಗೂ ಉಪನ್ಯಾಸಕಿಯರಾದ ಸ್ಮಿತಾ ವಿವೇಕ್ ಹಾಗೂ ಶಿವಾನಿ ಮಲ್ಯ ಉಪಸ್ಥಿತರಿದ್ದರು.
ಸುಮಾರು 100 ವಿದ್ಯಾರ್ಥಿಗಳು, ಸಹಾಯಕ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾರ್ಥಿನಿ ರಿಯಾ ಡಿ'ಸೋಜಾ ಕಾರ್ಯಕ್ರಮ ನಿರೂಪಿಸಿ, ಅಖಿಲ ಮತ್ತು ಬಳಗ ಪ್ರಾರ್ಥಿಸಿದರು. ಯಜ್ಞಶ್ ಸ್ವಾಗತಿಸಿದರು. ಮಲಿಹಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ನಿಫಾನ ವಂದಿಸಿದರು.