ಬಿಲ್ಲವ ಸಮುದಾಯದ ಹೆಣ್ಣು ಮಕ್ಕಳ ಕುರಿತಾಗಿ ಹೇಳಿಕೆ: ಇಡೀ ಹೆಣ್ಣು ಕುಲಕ್ಕೆ ಬೇಸರ ತಂದಿದೆ

ಬಿಲ್ಲವ ಸಮುದಾಯದ ಹೆಣ್ಣು ಮಕ್ಕಳ ಕುರಿತಾಗಿ ಹೇಳಿಕೆ: ಇಡೀ ಹೆಣ್ಣು ಕುಲಕ್ಕೆ ಬೇಸರ ತಂದಿದೆ


ಸುರತ್ಕಲ್: ಪಂಜ ಉಪವಲಯ ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ಎಂಬವರು ಬಿಲ್ಲವ ಸಮುದಾಯದ ಹೆಣ್ಣು ಮಕ್ಕಳ ಕುರಿತಾಗಿ ನೀಡಿರುವ ಹೇಳಿಕೆ ಇಡೀ ಹೆಣ್ಣು ಕುಲಕ್ಕೆ ಬೇಸರ ತಂದಿದೆ. ಜೊತೆಗೆ ಭಕ್ತಿಭಾವಗಳ ಭಜನೆ ಇತ್ತೀಚೆಗೆ ಕಮರ್ಷಿಯಲ್ ಆಗುತ್ತಿದೆ ಎಂದು ಕಾಂಗ್ರೆಸ್ ವಕ್ತಾರೆ ಪ್ರತಿಭಾ ಕುಳಾಯಿ ಆತಂಕ ವ್ಯಕ್ತಪಡಿಸಿದ್ದಾರೆ.

ಶನಿವಾರ ಸುರತ್ಕಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೀವ ಪೂಜಾರಿ ಅರಣ್ಯ ರಕ್ಷಣೆ ಮಾಡುವ ಕೆಲಸ ಬಿಟ್ಟು ಒಂದು ಸಮಾಜದ ಹೆಣ್ಣು ಮಕ್ಕಳನ್ನು ಗುರಿಯಾಗಿಸಿ ಇಡೀ ಹೆಣ್ಣು ಕುಲವನ್ನೇ ನಿಂದಿಸಿದ್ದಾರೆ. ಅವರು ಹೇಳಿಕೆಯನ್ನು ಸಮರ್ಥಿಸುವಾಗ ದಾಖಲೆಗಳಿರುವುದಾಗಿ ತಿಳಿಸಿದ್ದಾರೆ. ಹಾಗಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಅವರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಿ ದಾಖಲೆಗಳನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಒತ್ತಾಯಿಸಿದರು. 

ಭಕ್ತಭಾವದಿಂದ ದೇವಸ್ಥಾನಗಳಲ್ಲಿ, ಭಜನಾ ಮಂದಿರಗಳಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮಗಳನ್ನು ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಹಿಂದುಳಿದ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರತಿಭಾ ಕುಳಾಯಿ ಆರೋಪಿಸಿದರು.

ಮೇಲ್ಜಾತಿಯ ಹೆಣ್ಣು ಮಕ್ಕಳು ಸಭೆ ಸಮಾರಂಭಗಳ ವೇದಿಕೆಗಳಲ್ಲಿ ಗೌರವಯುತವಾಗಿ ಕುಣಿಯುತ್ತಿದ್ದರೆ, ಹಿಂದುಳಿದ, ಪರಿಶಿಷ್ಟ ಪಂಗಡದ ಹೆಣ್ಣು ಮಕ್ಕಳನ್ನು ಬೀದಿಗಳಲ್ಲಿ ಕುಣಿಸಲಾಗುತ್ತಿದೆ. ಭಜನೆ ಹಿಂದೂ ಧರ್ಮದ ಸಂಸ್ಕೃತಿಯೇ ಆಗಿದ್ದರೂ, ಭಜನೆ ಮಾಡುತ್ತಾ ರಸ್ತೆ, ಬಿದಿಗಳಲ್ಲಿ ಕುಣಿಯವುದು ತಪ್ಪು. ಅದು ಭಾರತೀಯ ಸಂಸ್ಕೃತಿ ಅಲ್ಲ ಎಂದು ಅವರು ಹೇಳಿದರು.

ಹಿಂದೂ ಧರ್ಮದ ರಕ್ಷಕರೆನಿಸಿಕೊಂಡವರು ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎನ್ನುತ್ತಾರೆ. ಆದರೆ, ದೇವಸ್ಥಾನಗಳಲ್ಲಿ ಏಕೆ ಎಲ್ಲಾ ಜಾತಿಗಳನ್ನು ಒಂದಾಗಿ ಕುಳ್ಳಿರಿಸಿ ಸಹ ಭೋಜನಕ್ಕೆ ಅವಕಾಶ ನೀಡುತ್ತಿಲ್ಲ. ಜಾತಿಯ ನೆಪದಲ್ಲಿ ಯಾಕೆ ದೇವಸ್ಥಾನ ಪ್ರವೇಶಕ್ಕೆ ನಿರಾಕರಿಸಲಾಗುತ್ತಿದೆ? ಇಂತಹ ಸಂದರ್ಭಗಳಲ್ಲಿ ನಾವೆಲ್ಲರೂ ಹಿಂದೂ ಎಂಬ ಮಾತು ಯಾಕೆ ಮರೆತು ಹೋಗುತ್ತದೆ? ಹಿಂದುತ್ವ ಸಂಘಟನೆಗಳ ಮುಖಂಡರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ರಸ್ತೆ, ಬೀದಿಗಳಲ್ಲಿ ನಡೆಯುವ ಕುಣಿತ ಭಜನೆಗೆ ಕಳುಹಿಸುತ್ತಾರಾ ಎಂದು ಪ್ರಶ್ನಿಸಿದ ಪ್ರತಿಭಾ ಕುಳಾಯಿ, ಈ ಬಗ್ಗೆ ಹೆಣ್ಣು ಮಕ್ಕಳ ಹೆತ್ತವರು ಯೋಚಿಸಬೇಕಿದೆ ಎಂದರು.

ಸಂಸ್ಕೃತಿ, ಧರ್ಮವನ್ನು ಬೀದಿಗೆ ತಂದವರು ರಾಜಕೀಯದವರು. ಮೊದಲು ಹತ್ಯೆಗಳನ್ನು ಮಾಡುತ್ತಾ ರಾಜಕೀಯ ಮಾಡುತ್ತಿದ್ದರು. ಈಗ ಹೆಣ್ಣು ಮಕ್ಕಳನ್ನು ಮುಂದಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಾ ಕುಳಾಯಿ, ಹೆಣ್ಣು ಮಕ್ಕಳನ್ನು ಬಳಸಿಕೊಂಡು ರಸ್ತೆ, ಬೀದಿಗಳಲ್ಲಿ ಮಾಡುವ ಭಜನೆಗಳು ಸಮಂಜಸವೇ ಅಥವಾ ಅಸಮಂಜಸವೇ ಎಂಬ ಕುರಿತಾಗಿ ಸ್ವಾಮೀಜಿಗಳು, ಧರ್ಮ ಗುರುಗಳು ಹಾಗೂ ಸ್ವಘೋಷಿತ ಹಿಂದೂ ನಾಯಕರು ಸ್ಪಷ್ಟನೆ ನೀಡಬೇಕು ಒತ್ತಾಯಿಸಿದರು.

ದಸರಾ ಮೆರವಣಿಗೆಯಲ್ಲಿ ಕ್ಯಾಬರೇ ಡಾನ್ಸ್:

ಭಕ್ತ ಭಾವದಿಂದ ನಡೆಯಬೇಕಿದ್ದ ಮಂಗಳೂರು ದಸರಾ ಮೆರವಣಿಗೆಯಲ್ಲಿ ದೇವರೊಂದಿಗೆ ಹೆಣ್ಣು ಮಕ್ಕಳ ದಿರಿಸು ಧರಿಸಿಕೊಂಡು ಅಸಭ್ಯವಾದ ಕ್ಯಾಬರೇ ಡಾನ್ಸ್ ಆಯೋಜಿಸಲಾಗಿತ್ತು. ದೇವರ ಕಾರ್ಯಕ್ರಮದಲ್ಲೇ ತುಂಡು ಬಟ್ಟೆಗಳನ್ನು ಧರಿಸಿ ಇಡೀ ಹೆಣ್ಣು ಕುಲಕ್ಕೆ ಅವಮಾನ ಮಾಡಲಾಗಿದೆ ಎಂದು ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article