ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಿರಿಬಾಗಿಲು ಪ್ರತಿಷ್ಠಾನಕ್ಕೆ 15 ಲಕ್ಷ ರೂ. ಕೊಡುಗೆ
Tuesday, October 1, 2024
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನ ಹಾಗು ತೆಂಕು ತಿಟ್ಟು ಯಕ್ಷಗಾನದ ಬೃಹತ್ ಮ್ಯೂಸಿಯಂನ ಯೋಜನೆಯನ್ನು ಮೆಚ್ಚಿ ಆರಂಭದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ 10 ಲಕ್ಷ ರೂ. ನೆರವು ನೀಡಿದ್ದು, ಇದೀಗ ಮತ್ತೆ ಶ್ರೀ ಮಂಜುನಾಥೇಶ್ವರ ಸ್ವಾಮಿಯ ಪ್ರಸಾದ ರೂಪವಾಗಿ 15 ಲಕ್ಷ ರೂ. ಆರ್ಥಿಕ ನೆರವಿನ ಧನಸಹಾಯ ನೀಡಿ ಹರಸಿರುತ್ತಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಸಾಂಸ್ಕೃತಿಕ ಭವನ, ಮ್ಯೂಸಿಯಂ ಲೋಕಾರ್ಪಣೆ ಗೊಳಿಸಿದ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಯಕ್ಷಗಾನ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಅಧ್ಯಯನಕ್ಕೆ ಇದೊಂದು ದೊಡ್ಡ ಕೊಡುಗೆಯಾಗಲಿದೆ ಎಂದು ಶುಭ ಹಾರೈಸಿದ್ದರು. ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಧರ್ಮಸ್ಥಳ ಮೇಳದ ಯಜಮಾನರಾದ ಡಿ. ಹರ್ಷೇಂದ್ರ ಕುಮಾರ್ ಅವರು ಯಕ್ಷಗಾನ ಮ್ಯೂಸಿಯಂಗೆ ಭೇಟಿ ನೀಡಿ ಇದೊಂದು ಕಲಾ ವಲಯದ ಅದ್ಬತ ಎಂದು ಶ್ಲಾಘಿಸಿದ್ದರು.
ಪ್ರತಿಷ್ಠಾನದ ಅಧ್ಯಕ್ಷ, ಶ್ರೀ ಧರ್ಮಸ್ಥಳ ಮೇಳದ ಪ್ರಧಾನ ಭಾಗವತ ರಾಮಕೃಷ್ಣ ಮಯ್ಯ ಅವರು ಕ್ಷೇತ್ರದಿಂದ ನೀಡಿದ ಆರ್ಥಿಕ ನೆರವಿನ ಸಹಕಾರವನ್ನು ಕೃತಜ್ಞತೆಯಿಂದ ಸ್ವೀಕರಿಸಿದರು. ಪ್ರತಿಷ್ಠಾನದ ಕಾರ್ಯಕರ್ತರಾದ ಪ್ರಸನ್ನ ಕಾರಂತ ದೇಶಮಂಗಲ, ಶ್ರೀಮುಖ ಮಯ್ಯ, ಸಿರಿಬಾಗಿಲು ಉಪಸ್ಥಿತರಿದ್ದರು.