
ಮದ್ಯಪಾನದಿಂದ ಆಯುಷ್ಯ ಕಡಿಮೆಯಾಗುವುದರೊಂದಿಗೆ ಗೌರವಕ್ಕೂ ಕುಂದು ಬರುತ್ತದೆ: ವೀರೇಂದ್ರ ಹೆಗ್ಗಡೆ
Monday, October 28, 2024
ಉಜಿರೆ: ಮದ್ಯಪಾನ ಮಾಡುವುವರಿಗೆ ಎಲ್ಲಾರೂ ಸ್ನೇಹಿತರೇ, ಊರು, ಜಾತಿ, ಮತ ಭೇದವಿಲ್ಲದೇ ವ್ಯಸನವೆಂಬುದು ಪ್ರಾಣಿಯು ಬೋನಿಗೆ ಬಿದ್ದಂತೆ, ಬೋನಿನೊಳಗೆ ಬಿದ್ದರೆ ಹೊರ ಬರಲು ಕಷ್ಟ. ಕುಡಿತ ಮಾಡುವುದರಿಂದ ಮನುಷ್ಯನ ಆಯುಷ್ಯ ಕಡಿಮೆ ಆಗುವುದರೊಂದಿಗೆ ಘನತೆ ಗೌರವಕ್ಕೆ ಕುಂದು ಬರುತ್ತದೆ. ದುರಾದೃಷ್ಠವೆಂದರೆ ಯಾವುದೇ ಸಿನಿಮಾದಲ್ಲಿ ಸ್ನೇಹಿತರು ಸೇರಿದ ಕೂಡಲೇ ಮದ್ಯಪಾನ, ಧೂಮಪಾನ ಮುಂತಾದ ದೃಶ್ಯಗಳು ಇರುವುದು ಬೇಸರದ ವಿಷಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು 234ನೇ ವಿಶೇಷ ಮದ್ಯವರ್ಜನ ಶಿಬಿರದ 66 ಮಂದಿ ಶಿಬಿರಾರ್ಥಿಗಳಿಗೆ ಆರ್ಶೀವಚನ ನೀಡಿದರು.
ಕುಡಿತ ಬಿಟ್ಟು ಶುದ್ಧ ಆದ ಮೇಲೆ ಮತ್ತೆ ಮೈಲಿಗೆ ಆಗದ ಹಾಗೇ ನೋಡಿಕೊಳ್ಳಬೇಕು. ತಮ್ಮ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ಶ್ರಮವಹಿಸಿಕೊಂಡು ಜಾಗೂರುಕತೆಯಿಂದ ಜೀವನ ನಡೆಸಬೇಕು. ವ್ಯಸನಿಗಳ ಸಂಕಲ್ಪಕ್ಕೆ ಪ್ರೇರಣೆ ಕೊಡುವುದೇ ಈ ಮದ್ಯವರ್ಜನ ಶಿಬಿರದ ಉದ್ದೇಶ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಮಾತನಾಡಿ, ಪುರ್ನಜನ್ಮ ಕೊಡುವ ವ್ಯವಸ್ಥೆ ಈ ಮದ್ಯವರ್ಜನ ಶಿಬಿರ ಎಂದರು.
ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಸ್ ಅವರು ಕುಟುಂಬ ದಿನ ಕಾರ್ಯಕ್ರಮ ನೇರವೇರಿಸಿದರು. ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ನಂದ ಕುಮಾರ್, ಆರೋಗ್ಯ ಸಹಾಯಕಿ ನೇತ್ರಾವತಿ ಸಹಕರಿಸಿದರು. ಮುಂದಿನ ವಿಶೇಷ ಶಿಬಿರವು ನ.4 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.