
ಸಿಪಿಐಎಂನ 24ನೇ ಉಳ್ಳಾಲ ವಲಯ ಸಮ್ಮೇಳನ
ಇಸ್ರೇಲ್‌ನಲ್ಲಿ ಹಿಟ್ಲರ್ ಆಡಳಿತದ ಪದ್ಧತಿ ಇದೆ: ಸುನಿಲ್ ಕುಮಾರ್ ಬಜಾಲ್
ಉಳ್ಳಾಲ: ಪ್ರಜಾಪ್ರಭುತ್ವ ಉಳಿವಿಗಾಗಿ ಸಮ್ಮೇಳನವನ್ನು ಸಿಪಿಐಎಂ ಹಮ್ಮಿಕೊಳ್ಳುತ್ತಿದೆ. ಆದರೆ ಕಮ್ಯುನಿಸ್ಟರು ಸರ್ವಾಧಿಕಾರಿ ಎಂದು ಆರೋಪ ಮಾಡುತ್ತಾರೆ. ನಾವು ಜಾಗತಿಕ ಮಟ್ಟದಲ್ಲಿ ಪರಿಸ್ಥಿತಿ ಅವಲೋಕನ ಮಾಡಿ, ದೇಶದ ಪರಿಸ್ಥಿತಿ ಅರ್ಥಮಾಡಿಕೊಂಡು ಕೆಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಸರ್ವಾಧಿಕಾರಿ ಧೋರಣೆ ಅನುಸರಿಸುವವರು ನಾವಲ್ಲ ಎಂದು ಸಿಪಿಐಎಂ ಮುಖಂಡ ಸುನಿಲ್ ಕುಮಾರ್ ಬಜಾಲ್ ಹೇಳಿದರು.
ಅವರು ತೊಕ್ಕೊಟ್ಟು ಸಮೃದ್ಧಿ ಸಭಾಂಗಣದಲ್ಲಿ ಭಾನುವಾರ ನಡೆದ ಸಿಪಿಐಎಂನ 24ನೇ ಉಳ್ಳಾಲ ವಲಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಇಸ್ರೇಲ್ ಹಿಟ್ಲರ್‌ನ ಆಡಳಿತ ಪದ್ದತಿ ಇದೆ.ಎಳೆಯ ಮಕ್ಕಳನ್ನು ಸಾಯಿಸುವ ಘಟನೆ, ಮಹಿಳೆಯರ, ವೃದ್ಧೆಯರ ಮೇಲೆ ದಾಳಿ ಮಾಡುತ್ತಿರುವುದನ್ನು ಗಮನಿಸಿದರೆ ಕಣ್ಣೀರು ಬರುತ್ತದೆ. ಇದನ್ನು ವಿಶ್ವ ಸಂಸ್ಥೆ ಕೂಡ ಖಂಡಿಸಿದೆ. ಈ ಸಂದರ್ಭದಲ್ಲಿ ನಾವು ಪ್ಯಾಲೆಸ್ತೀನ್‌ಗೆ ಬೆಂಬಲ ನೀಡಬೇಕು.
ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ದಾಳಿಗೆ ಬೆಂಬಲ ನೀಡಿದ್ದು ಅಮೆರಿಕ. ಅಮೆರಿಕ ಯುದ್ಧ ಸೃಷ್ಟಿ ಮಾಡಿ ಭಯೋತ್ಪಾದಕ ರಾಷ್ಟ್ರ ಆಗಿ ಬಿಟ್ಟಿದೆ ಎಂದು ಆರೋಪಿಸಿದರು.
ಬಂಡವಾಳ ಶಾಹಿಗಳ ಬಗ್ಗೆ ಧೋರಣೆಯಿಂದ ದೇಶ ಹಾಳಾಗುತ್ತದೆ. ಜಾಗತಿಕ ಮಟ್ಟದ ಅಧ್ಯಯನದಲ್ಲಿ 140 ಕೋಟಿ ಜನರ ಪೈಕಿ 23 ಕೋಟಿ ಜನ ಭಾರತದಲ್ಲಿ ಹಸಿವಿನಿಂದ ಸಾಧಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಇಲ್ಲಿನ ಪರಿಸ್ಥಿತಿ ಹೇಗಿದೆ ಎಂದು ಇದರಿಂದ ಅರ್ಥವಾಗುತ್ತದೆ ಎಂದು ಹೇಳಿದರು.
ಎನ್‌ಡಿಎ ಸರ್ಕಾರ ಆಡಳಿತದಿಂದ ದೇಶ ಹದಗೆಟ್ಟಿದೆ. ಇಲ್ಲಿನ ಜನರಿಗೆ ಯಾವುದೇ ರಕ್ಷಣೆ ಇಲ್ಲ. ಒಟ್ಟಿನಲ್ಲಿ ಸಂಕಷ್ಟದ ಪರಿಸ್ಥಿತಿ ಈಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ವಿರೋಧಿ ಮತಗಳನ್ನು ಒಗ್ಗೂಡಿಸುವ ಕೆಲಸ ಮಾಡಲಾಯಿತು.ಇಂಡಿಯಾ ಒಕ್ಕೂಟ ಮಾಡಿದ್ದು ಸಿಪಿಐಎಂ ಹೊರತು ಕಾಂಗ್ರೆಸಿಗರಲ್ಲ. ಇದರಲ್ಲಿ ಅತಿದೊಡ್ಡ ಪಾತ್ರ ಸಿಪಿಐಎಂನದ್ದು ಇತ್ತು. ಈ ಕಾರಣದಿಂದ 400 ಸ್ಥಾನ ಪಡೆಯುವ ಹೆಗ್ಗಳಿಕೆಗೆಯಲ್ಲಿದ್ದ ಬಿಜೆಪಿಯ ಸ್ಥಾನ 240ಕ್ಕೆ ಇಳಿಯಿತು ಎಂದು ಹೇಳಿದರು.
ಸಿಪಿಐಎಂ ಉಳ್ಳಾಲ ವಲಯ ೨೪ನೇ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ರಮೇಶ್ ಉಳ್ಳಾಲ ಮಾತನಾಡಿ, ದೇಶದ ಬಜೆಟ್ 47 ಲಕ್ಷ ಕೋಟಿ ಒಳಗೆ ಇದೆ. ಇದಕ್ಕಿಂತ ಜಾಸ್ತಿ ಮೊತ್ತದ ಆಸ್ತಿ ಬಂಡವಾಳ ಶಾಹಿಗಳ ಕೈಯಲ್ಲಿ ಇದೆ. ಇವರಿಂದ ದೇಶ ಹದಗೆಡುತ್ತದೆ.ಇದೀಗ ಇಸ್ರೇಲ್, ಪ್ಯಾಲೆಸ್ತೀನ್ ನಡುವೆ ಯಾಕೆ ಯುದ್ಧ ಆಗುತ್ತದೆ. ಇದಕ್ಕೆ ಕಾರಣ ಏನು ಎಂಬುದನ್ನು ಎಲ್ಲರೂ ತಿಳಿಯಬೇಕು. ಅಮೆರಿಕ ತೈಲ ಉತ್ಪಾದನೆ ಯಾಗುವ ಮುಸ್ಲಿಂ ರಾಷ್ಟ್ರಗಳ ವಿರುದ್ಧ ಇಸ್ರೇಲ್ ರಾಷ್ಟ್ರವನ್ನು ಮುಂದಿಟ್ಟುಕೊಂಡು ದಾಳಿ ಮಾಡುತ್ತದೆ. ಅವರಿಗೆ ಆ ರಾಷ್ಟ್ರಗಳನ್ನು ಸ್ವಾಧೀನ ಪಡಿಸಿಕೊಳ್ಳಬೇಕು. ಇದಕ್ಕಾಗಿ ಸಾಮ್ರಾಜ್ಯ ಶಾಹಿ ಅಮೆರಿಕ ಇಸ್ರೇಲ್ ಮುಖಾಂತರ ನರಮೇಧ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ಯಾಲೆಸ್ತೀನ್ ವಿರುದ್ಧ ದಾಳಿಗೆ ಇಸ್ರೇಲ್ ರಾಷ್ಟ್ರದಲ್ಲೇ ವಿರೋಧ ಇದೆ. ಇಸ್ರೇಲ್‌ನಲ್ಲೇ ಕಮ್ಯುನಿಸ್ಟರು ಈ ಯುದ್ಧ ನಿಲ್ಲಬೇಕು ಎಂದು ಒತ್ತಾಯಿಸಿ ಹೋರಾಟ ಮಾಡುತ್ತಿದ್ದಾರೆ. ಭಾರತದಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದರೆ ಎಫ್‌ಐಆರ್ ದಾಖಲು ಆಗುತ್ತದೆ. ನಾವಿರುವುದು ಪ್ಯಾಲೆಸ್ತೀನ್ ಪರ. ಇಸ್ರೇಲ್ ಪರ ಅಲ್ಲ. ಮತ್ತೆ ಪ್ಯಾಲೆಸ್ತೀನ್ ಧ್ವಜ ಹಿಡಿದ ವ್ಯಕ್ತಿ ಮೇಲೆ ಪ್ರಕರಣ ದಾಖಲು ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಸಿಪಿಐಎಂ ಉಳ್ಳಾಲ ವಲಯ ಸಮ್ಮೇಳನದ ಸ್ವಾಗತ ಸಮಿತಿ ಉಪಾಧ್ಯಕ್ಷ ಸುಕುಮಾರ್ ತೊಕ್ಕೊಟ್ಟು ಇಸ್ರೇಲ್, ಪ್ಯಾಲೆಸ್ತೀನ್ ದಾಳಿ ಖಂಡನೆ ಮಾಡಿ ತಕ್ಷಣ ಯುದ್ಧ ಸ್ಥಗಿತ ಮಾಡುವಂತೆ ಆಗ್ರಹಿಸಿ ಸಭೆಯಲ್ಲಿ ನಿರ್ಣಯ ಮಂಡಿಸಿದರು. ಜಯಂತ್ ನಾಯ್ಕ್ ನಿರ್ಣಯ ಅಂಗೀಕರಿಸಿದರು. ಪದ್ಮಾವತಿ ಕುತ್ತಾರ್ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಿಪಿಐಎಂ ಉಳ್ಳಾಲ ವಲಯ ಸಮ್ಮೇಳನದ ಕೋಶಾಧಿಕಾರಿ ಪದ್ಮಾವತಿ ಶೆಟ್ಟಿ, ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಸುಕುಮಾರ್ ತೊಕ್ಕೊಟ್ಟು, ಕೃಷ್ಣಪ್ಪ ಸಾಲಿಯಾನ್, ಜನಾರ್ದನ ಕುತ್ತಾರ್, ಲೋಕಯ್ಯ ಪನೀರ್, ಸುನಿಲ್ ಕುಮಾರ್ ಬಜಾಲ್, ರಾಮಚಂದ್ರ ಬಬ್ಬುಕಟ್ಫೆ, ಚಂದ್ರ ಹಾಸ್ ಪಿಲಾರ್, ಕಾರ್ಯದರ್ಶಿ ಸುನಿಲ್ ತೇವುಲ, ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಾಬಲ ದೆಪ್ಪಲಿಮಾರ್ ಉಪಸ್ಥಿತರಿದ್ದರು.