
ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಲಾರಿ ಢಿಕ್ಕಿ: ಓರ್ವ ಸಾವು
Thursday, October 31, 2024
ಉಳ್ಳಾಲ: ಮಾರ್ಗ ಮಧ್ಯೆ ಕೆಟ್ಟು ನಿಂತ ಕೆಎಸ್ಆರ್ಟಿಸಿ ಬಸ್ಸನ್ನು ತಪ್ಪಿಸುವ ಧಾವಂತದಲ್ಲಿ ಟೆಂಪೋ ಚಾಲಕ ನಿಯಂತ್ರಣ ಕಳೆದುಕೊಂಡು ಬಸ್ಸಿನಿಂದ ಕೆಳಗಿಳಿಯುತ್ತಿದ್ದ ಪ್ರಯಾಣಿಕರೊಬ್ಬರ ಮೇಲೆ ಹರಿದಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲ್ಲಾಪು ಆಡಂಕುದ್ರು ರಾ.ಹೆ. 66ರಲ್ಲಿ ಮಧ್ಯಾಹ್ನದ ವೇಳೆ ಸಂಭವಿಸಿದೆ.
ಬಂಟ್ವಾಳ ಮೂಲದ ಆದಂ (64) ಮೃತಪಟ್ಟವರು.
ಢಿಕ್ಕಿ ಹೊಡೆದು ನಿಯಂತ್ರಣ ತಪ್ಪಿದ ಟೆಂಪೋ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಇಲೆಕ್ಟಿಕ್ ಕಾರಿಗೆ ಢಿಕ್ಕಿ ಹೊಡೆದು ಬಳಿಕ ಅಂಗಡಿಯೊಂದರ ನಾಮಫಲಕಗಳಿಗೆ ಗುದ್ದಿ ಕಂದಕಕ್ಕೆ ಉರುಳಿದೆ.
ಮಂಗಳೂರಿನಿಂದ ಹೊರಟಿದ್ದ ಸರ್ಕಾರಿ ಬಸ್ ಆಡಂಕುದ್ರು ಬಳಿ ಕೆಟ್ಟು ನಿಂತಿದ್ದು, ಅವರು ಆ ಬಸ್ನಿಂದ ಇಳಿದು ರಸ್ತೆ ದಾಟುವಾಗ ಈ ದುರ್ಘಟನೆ ಸಂಭವಿಸಿದೆ. ಎಲೆಕ್ಟ್ರಿಕ್ ಕಾರಿನಲ್ಲಿ ಮಕ್ಕಳು ಕುಳಿತಿದ್ದು, ಚಾಲಕ ಹಾಟ್ ಚಿಪ್ಸ್ ಅಂಗಡಿಗೆ ತೆರಳಿದ್ದರು. ಅದೃಷ್ಟವಶಾತ್ ಮಕ್ಕಳು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.