
ನ.17 ರಂದು ಯುವ ಬ್ಯಾಡ್ಮಿಂಟನ್ ಟೂರ್ನಮೆಂಟ್
ಮಂಗಳೂರು: ಯಂಗ್ ಇಂಡಿಯನ್ಸ್(ವೈಐ) ಮಂಗಳೂರು ಚಾಪ್ಟರ್ ವತಿಯಿಂದ ವೈಐ ಯುವ ಬ್ಯಾಡ್ಮಿಂಟನ್ ಟೂರ್ನಮೆಂಟ್-2024 ನವೆಂಬರ್ 17 ರಂದು ಕೊಟ್ಟಾರದ ಗೋಲ್ಡನ್ ಶಟ್ಲ್ ಅಕಾಡೆಮಿಯಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಮಂಗಳೂರು ಚಾಪ್ಟರ್ ಅಧ್ಯಕ್ಷೆ ಆತ್ಮಕಾ ಅಮೀನ್, ಬೆಳಗ್ಗೆ 9.30ಕ್ಕೆ ಟೂರ್ನಮೆಂಟ್ ಆರಂಭವಾಗಲಿದ್ದು, ಎಂಟು ಅಂತರ್ ಕಾಲೇಜುಗಳ ತಂಡ ಪಾಲ್ಗೊಳ್ಳಲಿದೆ. ಲೀಗ್ ಮಾದರಿಯ ಟೂರ್ನಮೆಂಟ್ ಇದಾಗಿದ್ದು, ಬಾಲಕರ ಹಾಗೂ ಬಾಲಕಿಯರ ಸಿಂಗಲ್ಸ್ ಮತ್ತು ಡಬಲ್ಸ್ ಪಂದ್ಯ ನಡೆಯಲಿದೆ ಎಂದರು.
ಚೈಲ್ಡ್ ಲೈನ್ ಅರಿವು..
ಸಂಕಷ್ಟದಲ್ಲಿರುವ ಮಕ್ಕಳ ನೆರವಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆರಂಭಿಸಿದ 1098 ಚೈಲ್ಡ್ಲೈನ್ ಬಗ್ಗೆ ತಿಳಿವಳಿಕೆ ಮೂಡಿಸಲು ನ.15 ರಂದು ಬೆಳಗ್ಗೆ 11 ಗಂಟೆಗೆ ವಾಮಂಜೂರು ಸಂತ ಜೋಸೆಫ್ ಶಿಕ್ಷಣ ಸಂಸ್ಥೆಯಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇದರ ಅಂಗವಾಗಿ ವಾಮಂಜೂರಿನಿಂದ ಪಿಲಿಕುಳ ವರೆಗೆ ಸುಮಾರು 1.6 ಕಿ.ಮೀ. ದೂರ ವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಸುಮಾರು 1 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಮಕ್ಕಳ ಸುರಕ್ಷತೆ ಮತ್ತು ಆರೈಕೆ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶ ಎಂದರು.
ಮಂಗಳೂರು ಚಾಪ್ಟರ್ ಸಹ ಅಧ್ಯಕ್ಷೆ ಸಲೋಂ ಲೋಬೋ ಪಿಪೇರಾ, ಸಂಯೋಜಕ ಅಶಿಶ್ ರೈ ಉಪಸ್ಥಿತರಿದ್ದರು.