
ನ.24-25 ರಂದು ಎಐಸಿಸಿಟಿಯು ರಾಜ್ಯ ಸಮ್ಮೇಳನ
ಮಂಗಳೂರು: ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರಿಯ ಸಮಿತಿಯ (ಎಐಸಿಸಿಟಿಯು) ಪ್ರಥಮ ಕರ್ನಾಟಕ ರಾಜ್ಯ ಸಮ್ಮೇಳನ ನ.24 ಮತ್ತು ನ.25ರಂದು ಬಿ.ಸಿ.ರೋಡ್ನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಎಐಸಿಸಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಪಿ. ಅಪ್ಪಣ್ಣ, ಎರಡು ದಿನಗಳ ಕಾಲ ನಡೆಯಲಿರುವ ಸಮ್ಮೇಳನವು ನ.೨೪ರಂದು ಪೂರ್ವಾಹ್ನ 10 ಗಂಟೆಗೆ ‘ಶ್ರಮಜೀವಿಗಳ ಅಧಿಕಾರದತ್ತ’ ಜಾಥಾದಿಂದ ಆರಂಭವಾಗಲಿದ್ದು, ಬಳಿಕ ಬಿ.ಸಿ.ರೋಡಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ‘ಕರ್ನಾಟಕದಲ್ಲಿ ಕ್ರಾಂತಿಕಾರಿ ದುಡಿಯುವ ವರ್ಗದ ಹೋರಾಟ: ಮುಂದಿನ ದಾರಿ" ಬಹಿರಂಗ ಸಭೆ ನಡೆಯಲಿದೆ ಎಂದರು.
ಈ ಸಮ್ಮೇಳನವು ದೇಶದಲ್ಲಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳನ್ನು ಪರಿಚಯಿಸಿದ ನಂತರ, ಕಾರ್ಮಿಕ ವರ್ಗವು ನವ ಉದಾರೀಕರಣ ನೀತಿಗಳ ದಾಳಿಯಿಂದ ಚೇತರಿಸಿಕೊಳ್ಳದೇ ಇರುವ ಇಂದಿನ ಪರಿಸ್ಥಿತಿಯಲ್ಲಿ ಇನ್ನಷ್ಟು ಮಹತ್ವ ಪಡೆದುಕೊಳ್ಳುತ್ತದೆ. ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳು, ಕಾರ್ಮಿಕ ವರ್ಗದ ಮೇಲೆ ಆಗುತ್ತಿರುವ ಪರಿಣಾಮಗಳನ್ನು ಗಮನದಲ್ಲಿರಿಸಿ ಸಮ್ಮೇಳನ ನಡೆಸಲಾಗುತ್ತಿದೆ ಎಂದರು. ರಾಜ್ಯ ಸಮಿತಿ ಸದಸ್ಯೆ ಮೈತ್ರೇಯಿ ಕೃಷ್ಣನ್, ಜಿಲ್ಲಾ ಅಧ್ಯಕ್ಷ ರಾಮಣ್ಣ ವಿಟ್ಲ, ಜಿಲ್ಲಾ ಕಾರ್ಯದರ್ಶಿ ಕೆ.ಇ. ಮೋಹನ್, ನಾಗಾರಾಜ್ ಉಪಸ್ಥಿತರಿದ್ದರು.