
ಪ್ರಶಸ್ತಿ ಪತ್ರ ಜೊತೆ ಮೌಲ್ಯ ನೀಡಿ: ಹಿರಿಯ ಸಾಹಿತಿಯ ಸಲಹೆ
ಮಂಗಳೂರು: ರಾಜ್ಯೋತ್ಸವ ಪ್ರಶಸ್ತಿ ಪತ್ರದ ಜೊತೆಗೆ ನಗದು ಮೌಲ್ಯವನ್ನೂ ಮುಂದಿನ ದಿನಗಳಲ್ಲಿ ನೀಡುವಂತೆ ಪುತ್ತೂರಿನ ಹಿರಿಯ ಸಾಹಿತಿಯೊಬ್ಬರು ಸಚಿವರಿಗೆ ಸಲಹೆ ಮಾಡಿದ್ದಾರೆ.
ಪ್ರಶಸ್ತಿ ಪ್ರದಾನ ವೇಳೆ ಸಚಿವರಿಗೆ ಈ ಸಲಹೆ ನೀಡಿದ ಅವರು, ಪ್ರಶಸ್ತಿ ಜೊತೆಗೆ ಒಂದಷ್ಟು ಮೊತ್ತವನ್ನೂ ನೀಡಿದರೆ ಪ್ರಶಸ್ತಿಯ ಮೌಲ್ಯ ಹೆಚ್ಚಾಗುತ್ತದೆ. ಅಲ್ಲದೆ ಪ್ರಶಸ್ತಿ ಪುರಸ್ಕೃತರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಪುಕ್ಕಟೆ ಸಲಹೆ ನೀಡಿದ್ದಾರೆ.
ಜಿಲ್ಲಾ ಪ್ರಶಸ್ತಿಗೆ ವೈಯಕ್ತಿಕ ಸಾಧಕರಾಗಿ ಆರಂಭದಲ್ಲಿ 56 ಮಂದಿಯನ್ನು ಹಾಗೂ 24 ಸಂಸ್ಥೆಯನ್ನು ಆಯ್ಕೆ ಮಾಡಿ ಜಿಲ್ಲಾಡಳಿತ ಗುರುವಾರ ರಾತ್ರಿ ಪ್ರಕಟಿಸಿತ್ತು. ಆದರೆ ಶುಕ್ರವಾರ ಬೆಳಗ್ಗಿನ ಹೊತ್ತಿಗೆ ವೈಯಕ್ತಿಕ ಸಾಧಕರ ಸಂಖ್ಯೆ 63 ತಲುಪಿತ್ತು. ಒಟ್ಟು 63 ಸಾಧಕರು ಹಾಗೂ 24 ಸಂಘ ಸಂಸ್ಥೆ ಸೇರಿ 87 ಮಂದಿಯನ್ನು ಗೌರವಿಸಲಾಗಿದೆ.
ಪ್ರವೇದಿಕೆಗೆ ಕರೆಸಿ ಮತ್ತೆ ಕೆಳಗಿಳಿಸಿದರು!
ಪ್ರಶಸ್ತಿ ಪುರಸ್ಕೃತ ಆಯ್ಕೆ ಪಟ್ಟಿಯಲ್ಲಿದ್ದು, ವೇದಿಕೆಗೆ ಆಹ್ವಾನಿಸಿ ಮತ್ತೆ ಕೆಳಗಿಳಿಸಿದ ಪ್ರಸಂಗಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಸಾಕ್ಷಿಯಾಯಿತು. ಜಿಲ್ಲೆಯ ಎರಡು ಸಂಘ ಸಂಸ್ಥೆಗಳಿಗೆ ಕೊನೆಯ ಹಂತದಲ್ಲಿ ತಾಂತ್ರಿಕ ಕಾರಣಕ್ಕಾಗಿ ಪ್ರಶಸ್ತಿ ಪ್ರದಾನವನ್ನು ತಡೆಹಿಡಿರುವುದು ಗೊಂದಲಕ್ಕೆ ಕಾರಣವಾಯಿತು.
ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಮುಂಭಾಗದಲ್ಲಿ ಆ ಸಂಘ ಸಂಸ್ಥೆ ಪ್ರತಿನಿಧಿಗಳು ‘ನಮ್ಮನ್ನು ಆಹ್ವಾನಿಸಿ ಅವಮಾನ ಮಾಡಿರುವುದು ಬೇಸರ ತರಿಸಿದೆ’ ಎಂದು ನೋವು ತೋಡಿಕೊಂಡರು. ಸಚಿವರು ಮಾತನಾಡಿ, ‘ಈ ಬಗ್ಗೆ ಪರಿಶೀಲನೆ ನಡೆಸಿ ಸಂಘ ಸಂಸ್ಥೆಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕು’ ಎಂದು ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.
ಕ್ರಿಮಿನಲ್ಗೆ ಪ್ರಶಸ್ತಿ ಆರೋಪ:
ಮಂಗಳೂರು ತಾಲೂಕಿನಲ್ಲಿ ಸಾಮಾಜಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗಾಗಿ ಕ್ರಿಮಿನಲ್ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬರಿಗೆ ಪ್ರಶಸ್ತಿ ನೀಡಲಾಗಿದೆ ಎಂಬ ಆರೋ ಪ ಕೇಳಿಬಂದಿದೆ. ಸಾಮಾನ್ಯವಾಗಿ ಇಂತಹ ಪ್ರಶಸ್ತಿ ಘೋಷಿಸುವ ಮುನ್ನ ಪ್ರತಿ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಕೇಸು ಇದೆಯಾ ಎಂಬುದನ್ನು ಪೊಲೀಸ್ ಇಲಾಖೆ ಮೂಲಕ ಜಿಲ್ಲಾಡಳಿತ ಖಚಿತಪಡಿಸುವುದು ಕ್ರಮ.
ಪ್ರಶಸ್ತಿ ಪತ್ರವೇ ಸಿಕ್ಕಿಲ್ಲ:
ಈ ಬಾರಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಎಷ್ಟು ಅಧ್ವಾನವಾಗಿತ್ತು ಎಂದರೆ, ಪತ್ರಕರ್ತರೊಬ್ಬರ ಸಹಿತ ಕೆಲವು ಮಂದಿಗೆ ಪ್ರಶಸ್ತಿ ಪತ್ರವನ್ನೇ ನೀಡಿಲ್ಲ ಎಂಬ ದೂರು ವ್ಯಕ್ತವಾಗಿದೆ.