
ಪಿಲಿಕುಳಕ್ಕೂ ಕರಾವಳಿ ಉತ್ಸವ ವಿಸ್ತರಣೆ
ಮಂಗಳೂರು: ನಗರದ ಲಾಲ್‌ಬಾಗ್‌ನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಸಲಾಗುತ್ತಿದ್ದ, ಕಳೆದ ಕೆಲವು ವರ್ಷಗಳಿಂದ ಸ್ಥಗಿತಗೊಂಡ ಕರಾವಳಿ ಉತ್ಸವವನ್ನು ಈ ಬಾರಿ ಪಿಲಿಕುಳಕ್ಕೆ ವಿಸ್ತರಿಸಲು ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.
ಪಿಲಿಕುಳದ ಅರ್ಬನ್ ಹಾತ್, ಸಾಂಸ್ಕೃತಿಕ ಗ್ರಾಮ ಸೇರಿದಂತೆ ಲಭ್ಯವಿರುವ ಎಲ್ಲ ಸವಲತ್ತುಗಳನ್ನು ಉಪಯೋಗಿಸಿಕೊಳ್ಳಲಾಗುವುದು. ಅಲ್ಲಿನ ವಿಶಾಲವಾದ ಪ್ರದೇಶದಲ್ಲಿ ನಡೆಸುವ ಮೂಲಕ ಹೆಚ್ಚಿನ ಸಂಖ್ಯೆಯ ಜನರನ್ನು ಆಕರ್ಷಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ದ.ಕ. ಜಿಲ್ಲೆಯ ಭಾಷಾ ವೈವಿಧ್ಯತೆ, ಕೊರಗ ಸಮುದಾಯದ ಸಂಸ್ಕೃತಿಯ ಅನಾವರಣ ಸೇರಿದಂತೆ ಹೊಸ ರೀತಿಯಲ್ಲಿ ಗ್ಲೋಬಲ್ ವಿಲೇಜ್ ಮಾದರಿಯಲ್ಲಿ ಕರಾವಳಿ ಉತ್ಸವ ಆಚರಿಸಲು ಚಿಂತಿಸಲಾಗಿದೆ. ಡಿಸೆಂಬರ್ ತಿಂಗಳ ಎರಡನೇ ಶನಿವಾರ(ಡಿ.14)ದಿಂದ ಜನವರಿ ತಿಂಗಳ(ಜ.15)ವರೆಗೆ ಒಂದು ತಿಂಗಳ ಅವಧಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅದರಂತೆ ಡಿ. 13ರಂದು ಸಂಜೆ ಉದ್ಘಾಟನಾ ಕಾರ್ಯಕ್ರಮ ನಡೆಸಿ ಬಳಿಕ ಒಂದು ತಿಂಗಳ ಕಾಲ ಕರಾವಳಿ ಉತ್ಸವ ನಡೆಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪಿಲಿಕುಳದಲ್ಲಿ ಕಂಬಳಕ್ಕೆ ಸೈಲೆನ್ಸ್ ಝೋನ್ ಅಡ್ಡಿ:
ಪ್ರಾಣಿ ಹಿಂಸೆಯ ನೆಪದಲ್ಲಿ ಬೆಂಗಳೂರಿನಲ್ಲಿ ಕಂಬಳ ನಡೆಸುವುದಕ್ಕೆ ಈಗಾಗಲೇ ಹೈಕೋರ್ಟ್‌ಗೆ ಕೆಲವರು ಮೊರೆ ಹೋಗಿದ್ದಾರೆ. ಪಿಲಿಕುಳದಲ್ಲಿರುವ ವನ್ಯ ಜೀವಿಗಳಿಗೂ ಕಂಬಳದಿಂದ ತೊಂದರೆ ಆಗಲಿದೆ ಎಂದು ಹೈಕೋರ್ಟ್‌ನಲ್ಲಿ ಕಳೆದೆರಡು ದಿನಗಳ ಹಿಂದೆ ದೂರು ಸಲ್ಲಿಕೆಯಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಗಮನ ಸೆಳೆದರು.
ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.