ರಕ್ತರಹಿತ ಪರಿವರ್ತನಾಶೀಲ ಚಳವಳಿಗಾರ ಬ್ರಹ್ಮಶ್ರೀ ನಾರಾಯಣ ಗುರು: ಮುದ್ದು ಮೂಡುಬೆಳ್ಳೆ

ರಕ್ತರಹಿತ ಪರಿವರ್ತನಾಶೀಲ ಚಳವಳಿಗಾರ ಬ್ರಹ್ಮಶ್ರೀ ನಾರಾಯಣ ಗುರು: ಮುದ್ದು ಮೂಡುಬೆಳ್ಳೆ


ಮಂಗಳೂರು: ಸಮಾಜದಲ್ಲಿ ಶೋಷಿತರ ಪರ ನಿಂತು ರಕ್ತರಹಿತ ಪರಿವರ್ತನಾಶೀಲ ಚಳವಳಿಯನ್ನು ಪೂರ್ಣತೆಗೆ ತೆಗೆದುಕೊಂಡು ಹೋದ ಸಾಮಾಜಿಕ ನೇತಾರ ಬ್ರಹ್ಮಶ್ರೀ ನಾರಾಯಣ ಗುರು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ಸ್ಥಾಪಕ ನಿರ್ದೇಶಕ ಮುದ್ದು ಮೂಡುಬೆಳ್ಳೆ ಹೇಳಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ವತಿಯಿಂದ ಹಮ್ಮಿಕೊಳ್ಳಲಾದ ಗುರು ಚಿಂತನ ಯುವ ಮಂಥನ ಆನ್ಲೈನ್ ವಿಶೇಷ ಉಪನ್ಯಾಸ ಸರಣಿ ಕಾರ್ಯಕ್ರಮದ ಮೊದಲ ಸಂಚಿಕೆ ಉದ್ಘಾಟಿಸಿ ಮಾತನಾಡಿದರು.

‘ನಾರಾಯಣಗುರು ಸುಧಾರಣಾ ಚಳವಳಿ ಮತ್ತು ಅನುಯಾಯಿಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ, ಬ್ರಹ್ಮಶ್ರೀ ಅವರು ತಮ್ಮ ಸೈದ್ಧಾಂತಿಕ ಚಿಂತನೆಯ ಮೂಲಕ ಇಡೀ ಸಮಾಜದಲ್ಲಿ ಒಂದಷ್ಟು ಬದಲಾವಣೆ ತರುವ ನಿಟ್ಟಿನಲ್ಲಿ ತಮ್ಮ ಬದುಕನ್ನು ಸವೆಸಿದರು. ಮತ ಯಾವುದಾದರೇನು ಮನುಷ್ಯ ಜಾತಿ ಒಂದೇ ಎಂಬ ಸಂದೇಶವನ್ನು ಶಿಷ್ಯರ ಜೊತೆಗೂಡಿ ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಿದರು. ಒಂದೇ ಜಾತಿ ಒಂದೇ ಮತ ಎಂಬ ಸರಳ ಮಾತಿನ ಮೂಲಕ ನೈತಿಕತೆಯನ್ನು ಸಮಾಜದಲ್ಲಿ ಪಸರಿಸಿದರು ಎಂದರು.

ಜೀವನೋಪಾಯಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಲ್ಲದೇ, ಧಾರ್ಮಿಕ ಕೇಂದ್ರಗಳು ನೈತಿಕತೆಯನ್ನು ಹರಡುವ ಕೇಂದ್ರಗಳಾಗಿಯೂ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು. ಸಮಾಜದಲ್ಲಿ ಮಹಿಳೆಯರಿಗೆ ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಕ ಅವರ ಸ್ವಾವಂಬನೆಗೆ ಶ್ರಮಿಸಿದರು. ಆಡಂಬರದ ಜೀವನಕ್ಕೆ ಮಹತ್ವ ನೀಡದೇ ಸರಳವಾಗಿ ಬದುಕನ್ನು ನಡೆಸಿ ಮಾದರಿ ಎನಿಸಿಕೊಂಡ ಸಂತ ಎಂದು ಶ್ಲಾಘಿಸಿದರು. 

ಸಾಮಾಜಿಕವಾಗಿ ದೇವರಿಗೆ ಸಮಾನವಾದ ಚಿಂತನೆಗಳನ್ನು ಬೆಳೆಸಿಕೊಂಡು ಉತ್ತಮ ಜೀವನ ರೂಪಿಸಿಕೊಂಡರೆ ಆ ವ್ಯಕ್ತಿ ದೇವರಿಗೆ ಸಮನಾಗುತ್ತಾನೆ ಎಂಬ ತತ್ತ್ವದಡಿ ಧಾರ್ಮಿಕ ಚಿಂತನೆಗಳನ್ನು ಸರಳೀಕರಣಗೊಳಿಸಿದರು ಎಂದು ವಿವರಿಸಿದರು.  

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ, ಶೈಕ್ಷಣಿಕ ವಲಯದಲ್ಲಿ ಅಂಬೇಡ್ಕರ್, ಗಾಂಧೀಜಿ ಹಾಗೂ ನಾರಾಯಣ ಗುರುಗಳಂತಹವರ ಚಿಂತನೆಗಳನ್ನು ಯುವ ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ. ಸಮಾಜದಲ್ಲಿ ಜಾತಿ ಪ್ರಾಬಲ್ಯತೆ ಉತ್ತುಂಗದಲ್ಲಿದ್ದ ವೇಳೆಯಲ್ಲಿ ಹಿಂದುಳಿದ ವರ್ಗದ ಪರ ನಿಲ್ಲುವ ಮೂಲಕ ಇಂದಿಗೂ ಮಾದರಿಯಾಗಿದ್ದಾರೆ. ಅಂದಿನ ಯುವ ಪೀಳಿಗೆಗೆ ದೇಶದ ವಾಸ್ತವ ಪರಿಸ್ಥಿತಿಯನ್ನು ಪರಿಚಯ ಮಾಡಿಕೊಟ್ಟ ಮಹನೀಯ ನಾರಾಯಣ ಗುರು ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಬ್ರಹ್ಮಶ್ರೀ ನಾರಾಯಣ ಗುರು ಪೀಠದ ನಿರ್ದೇಶಕ ಡಾ. ಜಯರಾಜ್ ಎನ್., ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ಪಿಲಾರ್ ಹಾಗೂ ಇತರೆ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article