
ನಿಯಂತ್ರಣ ತಪ್ಪಿದ ರಿಕ್ಷಾ ಅಪಘಾತ: ಸಾವು
Monday, November 25, 2024
ಮಂಗಳೂರು: ಕೊಣಾಜೆ ಪುಳಿಂಚಾಡಿ ಇಳಿಜಾರು ಪ್ರದೇಶದಲ್ಲಿ ರಿಕ್ಷಾವೊಂದು ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ರವಿವಾರ ಸಂಜೆ ಸಂಭವಿಸಿದೆ.
ಕುಂಬಳೆ ಮಂಜತ್ತಡ್ಕ ನಿವಾಸಿ ನಾರಾಯಣ ಗಟ್ಟಿ (50) ಮೃತರು ಎಂದು ಗುರುತಿಸಲಾಗಿದೆ.
ಸಂಬಂಧಿಕರೊಬ್ಬರ ಆರೋಗ್ಯ ವಿಚಾರಿಸಲೆಂದು ಕೊಣಾಜೆ ಪುಳಿಂಚಾಡಿಯ ಕಲ್ಕಾರ್ ಎಂಬಲ್ಲಿಗೆ ನಾರಾಯಣ ಗಟ್ಟಿ ಅವರು ರಿಕ್ಷಾದಲ್ಲಿ ತೆರಳಿದ್ದರು. ಅಲ್ಲಿ ಇಳಿಜಾರು ಪ್ರದೇಶದಲ್ಲಿ ರಿಕ್ಷಾ ಇಳಿಯುತ್ತಿದ್ದಂತೆ ಬ್ರೇಕ್ ವೈಫಲ್ಯಕ್ಕೀಡಾಗಿ ಮರವೊಂದಕ್ಕೆ ಢಿಕ್ಕಿ ಹೊಡೆದಿದೆ. ಈ ವೇಳೆ ಗಂಭೀರ ಗಾಯಗೊಂಡ ನಾರಾಯಣ ಗಟ್ಟಿ ಅವರು ಮೃತಪಟ್ಟಿದ್ದು, ಘಟನೆಯಲ್ಲಿ ರಿಕ್ಷಾದೊಳಗಿದ್ದ ಸಂಬಂಧಿ ಮಹಿಳೆ, ಅವರ ಪುತ್ರ ಹಾಗೂ ಇನ್ನೋರ್ವರಿಗೆ ಗಾಯಗಳಾಗಿವೆ.
ನಾರಾಯಣ ಗಟ್ಟಿ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.