
ಸಣ್ಣ ಪ್ರಾಯದಿಂದಲೇ ಮಕ್ಕಳುಗಳು ಮುದ್ರಿತ ಪುಸ್ತಕಗಳನ್ನು ಓದಬೇಕು: ಮೋಹನ್ ರಾವ್
ಮಂಗಳೂರು: ಈಗಿನ ಮಕ್ಕಳು ಜ್ಞಾನಾರ್ಜನೆಗಾಗಿ ಹೆಚ್ಚಾಗಿ ಮೊಬೈಲ್, ಕಂಪೂಟರ್ಗಳನ್ನೇ ಅವಲಂಬಿಸಿದ್ದಾರೆ. ಆದರೆ ಆರೋಗ್ಯದ ದೃಷ್ಠಿಯಿಂದ ಇದು ಅಷ್ಟು ಒಳ್ಳೆಯದಲ್ಲ. ಸಣ್ಣಪ್ರಾಯದಿಂದಲೇ ಮುದ್ರಿತವಾದ ವೀರಪುರುಷರ, ನೈತಿಕ ಮೌಲ್ಯಗಳ ಪುಸ್ತಕಗಳನ್ನು ಓದುತ್ತಾ ಬೆಳೆದರೆ ಮಕ್ಕಳು ಉತ್ತಮ ಜ್ಞಾನ, ಬುದ್ದಿಶಕ್ತಿಯನ್ನು ಹೊಂದಲು ಸಾಧ್ಯ ಎಂದು ಮುಲ್ಕಿ ವಿಜಯ ಕಾಲೇಜಿನ ನಿವೃತ್ತ ಗ್ರಂಥಪಾಲಕ ಮೋಹನ್ ರಾವ್ ಹೇಳಿದರು.
ದಕ್ಷಿಣ ಕನ್ನಡ ಮತ್ತು ಕೊಡಗು ಗ್ರಂಥಪಾಲಕರ ಸಂಘ (ರಿ) ಉಡುಪಿ ಗ್ರಂಥಾಲಯ ಸಪ್ತಾಹದ ಪ್ರಯುಕ್ತ ಸಂಘದ ಸದಸ್ಯರು ನ.14 ರಂದು ನಗರದ ಜಿ.ಪ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಾಡೆಶ್ವರ, ಮಂಗಳೂರು ಇಲ್ಲಿಗೆ ಭೇಟಿ ನೀಡಿ ಮಕ್ಕಳ ಜ್ಞಾನಾರ್ಜನೆಗೆ ಉಪಯುಕ್ತವಾದ ಸಾಧಕರ, ಸಾಹಿತಿಗಳ, ಮಹಾನ್ ವ್ಯಕ್ತಿಗಳ ಬಗೆಗಿನ ಪುಸ್ತಕಗಳು ಮಾತ್ರವಲ್ಲದೆ ನೀತಿಕಥೆ, ಕವನ ಇತ್ಯಾದಿ ಪುಸ್ತಕಗಳನ್ನು ದಾನವಾಗಿ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರದಲ್ಲಿ ಮಕ್ಕಳಿಗೆ ಕೆಲವು ರಸಪ್ರಶ್ನೆಗಳನ್ನು ಕೇಳಿ ಸರಿಯಾದ ಉತ್ತರವನ್ನು ನೀಡಿದವರಿಗೆ ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕರು ಮತ್ತು ಸಂಘದ ಸದಸ್ಯರು ಶಾಲೆಯ ಮುಖ್ಯೋಪಾಧ್ಯಾಯಿನಿ ಶಾಲಿನಿ ಅವರಿಗೆ ಮಕ್ಕಳ ಪ್ರಯೋಜನಕ್ಕಾಗಿ ಹಲವಾರು ಪುಸ್ತಕಗಳನ್ನು ಹಸ್ತಾಂತರಿಸಿದರು.
ಮಕ್ಕಳಿಗೆ ಆಟ ಮತ್ತು ಸಿಹಿ ತಿಂಡಿಯನ್ನು ನೀಡುವ ಮೂಲಕ ರಂಜಿಸಲಾಯಿತು.
ಕಾರ್ಯಕ್ರಮದಲ್ಲಿ ನಗರದ ವಿವಿಧ ಕಾಲೇಜುಗಳ ಗ್ರಂಥಪಾಲಕರುಗಳಾದ ಡಾ. ವನಜಾ, ಡಾ. ಸುಜಾತ, ಸಂತೋಷ ಕುಮಾರ, ರೆ. ಥಾಮಸ್ ಚಿಂದವಾಳ, ಸಂಜೀವ್, ಉಮಾ, ಪ್ರೀತಿ, ದಿವ್ಯ, ಭಾಗ್ಯವತಿ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಶಾಲಿನಿ ವಂದಿಸಿದರು.