
ಪುಟ್ಟ ಒಂದು ಬೋರ್ಡ್, ಕಲಿಯಲು ಕಡ್ಡಿ, ಸ್ಲೇಟ್
ಮಂಗಳೂರು: ನೂರಾರು ಮಂದಿ ಆಸಕ್ತರು ಮಕ್ಕಳಂತೆ ಬೆಂಚಿನಲ್ಲಿ ಕುಳಿತು ಸ್ಲೇಟ್, ಕಡ್ಡಿಯನ್ನು ಹಿಡಿದು ಅ, ಆ, ಇ, ಈ ಕಲಿತೇ ಬಿಟ್ಟರು.
ಹೌದು ಸುರತ್ಕಲ್ನಲ್ಲಿ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರ ಸಹಕಾರದಲ್ಲಿ ಭರತ್ ರಾಜ್ ಕೃಷ್ಣಾಪುರ ನೇತೃತ್ವದ ಸೇವಾ ಪ್ರತಿಷ್ಠಾನದ ವತಿಯಿಂದ ಇಂತಹುದೊಂದು ತುಳು ಪ್ರಚಾರ ಅಭಿಯಾನ ಎಲ್ಲರ ಗಮನ ಸೆಳೆಯಿತು.
ದೀಪಾವಳಿ ಸಂಭ್ರರಮ 2024ಕ್ಕೆ ಆಮಿಸಿದ ನೂರಾರು ಭಜಕರು ಬಿಡುವಿನ ಸಮಯದಲ್ಲಿ ತಮ್ಮ ತಮ್ಮ ಹೆಸರು, ಊರಿನ ಹೆಸರು ಬರೆಯಲು ಕಲಿತೇ ಬಿಟ್ಟರು. ತುಳುವಿನಲ್ಲಿ ವರ್ಣ ಮಾಲೆ ಕಲಿತರು.
ನಾಲ್ಕು ಗೋಡೆಯ ಮದ್ಯೆ ಇದ್ದ ತುಳು ಲಿಪಿ ಸುರತ್ಕಲ್ನಲ್ಲಿ ದೀಪಾವಳಿ ಸಂಭ್ರರಮಕ್ಕೆ ತನ್ನ ಮೆರುಗು ನೀಡಿತು. ಶಾಸಕ ಡಾ. ಭರತ್ ಶೆಟ್ಟಿ ವೈ ಅವರೂ ತುಳುವಿನಲ್ಲಿ ಹೆಸರು ಬರೆಯಲು ಕಲಿತರು. ಕಲಿಸುವ ತುಳು ಲಿಪಿ ಗುರುಗಳು ಸಹನೆಯಿಂದ ಬಂದವರಿಗೆ ಲಿಪಿ ಕಲಿಸಿ ಶ್ರೇಷ್ಠತೆ ಮೆರೆದರು.
ಮುಂದಿನ ಎರಡು ದಿನಗಳ ಕಾಲ ಇಲ್ಲಿನ ಟೆಂಟ್ ಶಾಲೆಯಲ್ಲಿ ಕಲಿಸಲಿದ್ದು ಆಸಕ್ತರು ಬಂದು ಹೆಮ್ಮೆಯ ತುಳು ಲಿಪಿ ಉಚಿತವಾಗಿ ಕಲಿಯಬಹುದು.
ಆಕರ್ಷಿಸಿದ ಪುರಾತನ ಪರಿಕರಗಳು:
ಇಲ್ಲಿನ ವಸ್ತು ಪ್ರದರ್ಶನಲ್ಲಿ ಈ ಹಿಂದಿನ ಪಾತ್ರೆ, ಪೂಜಾ ಸಾಮಾಗ್ರಿಗಳು, ಆಟದ ಮರದ ಮಣೆಗಳು, ಚಿನ್ನ, ಒಡವೆ ಇಡುತ್ತಿದ್ದ ಮರದ ಭದ್ರತಾ ಪೆಟ್ಟಿಗೆ, ನೆಟ್ಟಿಯ ಸಂದರ್ಭ ಬಳಕೆ ಮಾಡುವ ವಸ್ತುಗಳು ಇಲ್ಲಿದ್ದು ನೋಡುಗರ ಗಮನ ಸೆಳೆಯಿತು.
ನ.2 ಮತ್ತು 3ರಂದು ಆಹಾರ ಮೇಳ ಸುರತ್ಕಲ್ ಜಂಕ್ಷನ್ನಲ್ಲಿ ನಡೆಯಲಿದ್ದು ,ಇದರೊಂದಿಗೆ ಗುರುಕಿರಣ್ ಅವರ ಸಂಗೀತೋತ್ಸವವು ದೀಪಾವಳಿ ಸಂಭ್ರಮವನ್ನು ಹೆಚ್ಚಿಸಲಿದೆ.
ತುಳು ಭಾಷೆ ಎಲ್ಲರೂ ಕಲಿಯಬೇಕು. ಕನಿಷ್ಠ ಪಕ್ಷ ವರ್ಣಮಾಲೆ ಕಲಿತು ಆರಂಭಿಕ ಹಂತದಲ್ಲಿ ಹೆಸರು, ಊರ ಹೆಸರು ಬರೆಯಲು ಪ್ರತಿಯೊಬ್ಬರೂ ಕಲಿಯಬೇಕು ಎಂಬ ಅಪೇಕ್ಷೆಯಿಂದ ತುಳು ಲಿಪಿ ಕಲಿಕೆ ಇಟ್ಟಿದ್ದೇವೆ. ನೂರಾರು ಜನರು ಬರುತ್ತಿದ್ದಾರೆ. ಪ್ರೋತ್ಸಾಹ ನೋಡಿ ಸಂತೋಷವಾಗಿದೆ ಎಂದು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ ತಿಳಿಸಿದರು.