
ಪೊಲೀಸ್ ಆಯುಕ್ತರ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ
ಮಂಗಳೂರು: ಜನಪರ ಪ್ರತಿಭಟನೆಗಳನ್ನು ನಿರಾಕರಿಸಿ ಪ್ರಜಾಪ್ರಭುತ್ವದ ಹಕ್ಕುಗಳನ್ನು ದಮನಿಸುತ್ತಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ರನ್ನು ವರ್ಗಾವಣೆಗೊಳಿಸಬೇಕು ಎಂದು ಆಗ್ರಹಿಸಿ ಡಿವೈಎಫ್ಐ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಗುರುವಾರ ಸಂಜೆ ನಗರದ ಸ್ಟೇಟ್ಬ್ಯಾಂಕ್ ಸಮೀಪದ ರಾವ್ ಆಂಡ್ ರಾವ್ ಸರ್ಕಲ್ ಬಳಿ ಪ್ರತಿಭಟನೆ ನಡೆಯಿತು.
ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರ ವಿರುದ್ಧ ದಾಖಲಿಸಿದ ಪ್ರಕರಣವನ್ನು ಕೈ ಬಿಡಬೇಕು ಮತ್ತು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನು ವರ್ಗಾವಣೆಗೊಳಿಸಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು. ಅಲ್ಲದೆ ಪೊಲೀಸ್ ಆಯುಕ್ತರು ಮತ್ತು ರಾಜ್ಯ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನೆಕಾರರು, ಪೊಲೀಸರು ಸಂಘಿಗಳಂತೆ ವರ್ತಿಸಬಾರದು, ಕೇಸುಗಳ ಮೇಲೆ ಕೇಸು ಹಾಕಿದರೂ ನಾವು ಹೆದರುವುದಿಲ್ಲ, ತಾಕತ್ತಿದ್ದರೆ ನಮ್ಮನ್ನು ಬಂಧಿಸಿ ಎಂದು ಸವಾಲು ಹಾಕಿದರು.
ಪೊಲೀಸ್ ಆಯುಕ್ತರ ವಿರುದ್ಧ ಘೋಷಣೆ ಕೂಗುತ್ತಲೇ ರಸ್ತೆ ತಡೆ ನಡೆಸಲು ಮುಂದಾದ ಡಿವೈಎಫ್ಐ ಮುಖಂಡರಾದ ಬಿ.ಕೆ. ಇಮ್ತಿಯಾಝ್, ಸಂತೋಷ್ ಬಜಾಲ್, ನಿತಿನ್ ಕುತ್ತಾರ್, ರಫೀಕ್ ಹರೇಕಳ, ಅಶ್ರಫ್ ಹರೇಕಳ, ಇಬ್ರಾಹೀಂ ಮದಕ, ಮನೋಜ್ ವಾಮಂಜೂರು, ತಯ್ಯೂಬ್ ಬೆಂಗರೆ, ನೌಶಾದ್ ಬೆಂಗರೆ, ಮಹಾಬಲ ದೆಪ್ಪಲಿಮಾರ್, ರಝಾಕ್ ಮುಡಿಪು, ಶ್ರೀನಾಥ್ ಕುಲಾಲ್, ಪ್ರಮೀಳಾ ಶಕ್ತಿನಗರ, ಪ್ರವೀಳಾ ದೇವಾಡಿಗ, ಅಸುಂತ ಡಿಸೋಜ, ಭಾರತಿ ಬೋಳಾರ, ಮಾಧುರಿ ಬೋಳಾರ, ಯೋಗಿತಾ ಸುವರ್ಣ, ಮತ್ತಿತರರ ಸಹಿತ ಹಲವರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ಬಳಿಕ ಬಿಡುಗಡೆಗೊಳಿಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಡಿವೈಎಫ್ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಪೊಲೀಸ್ ಕಮಿಷನರ್ ಮೇಲೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ದ.ಕ.ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿಗೆ ಕಪ್ಪುಬಾವುಟ ಪ್ರದರ್ಶನ ಮಾಡಲಾಗು ವುದು ಎಂದು ಎಚ್ಚರಿಸಿದರು.