
ಕೃಷ್ಣದಾಸ ಪ್ರಭು ಬಿಡುಗಡೆಗೆ ಆಗ್ರಹಿಸಿ ವಿ.ಹೆಚ್.ಪಿ-ಬಜರಂಗ ದಳ ಪ್ರತಿಭಟನೆ
ಮಂಗಳೂರು: ಬಾಂಗ್ಲಾದೇಶದಲ್ಲಿ ಬಂಧಿಸಲ್ಪಟ್ಟ ಧಾರ್ಮಿಕ ಮುಖಂಡ ಚಿನ್ಮಯ ಕೃಷ್ಣದಾಸ ಪ್ರಭು ಅವರನ್ನು ಬಿಡುಗಡೆಗೊಳಿಸಬೇಕು, ಬಾಂಗ್ಲಾದ ಹಿಂದೂಗಳಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ವತಿಯಿಂದ ಇಂದು ನಗರದ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ವಿಹೆಚ್ ಪಿ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಡಾ. ಎಂ.ಬಿ.ಪುರಾಣಿಕ್ ಅವರು, ಬಾಂಗ್ಲಾದಿಂದ ಹಿಂದೂಗಳನ್ನು ಹೊರ ದಬ್ಬುವ ಷಡ್ಯಂತ್ರ ನಡೆಯುತ್ತಿದೆ. ಜಗತ್ತಿನಲ್ಲಿ ಶಾಂತಿಗಾಗಿ ಹುಟ್ಟಿದ ಇಸ್ಕಾನ್ ಸಂಸ್ಥೆ ಜಗತ್ತಿನ ಜನರ ಪ್ರೀತಿ ಗಳಿಸಿದೆ. ಬಡವರ ಸೇವೆ ಮಾಡುತ್ತಿರುವ ಇಸ್ಕಾನ್ ನ ಸ್ವಾಮಿಗಳನ್ನು ಏನೂ ಕಾರಣ ಕೊಡದೆ ಬಾಂಗ್ಲಾದಲ್ಲಿ ಬಂಧಿಸಿದ್ದಾರೆ. ಅಲ್ಲಿನ ಸರಕಾರ, ನ್ಯಾಯಾಲಯ ಅಲ್ಲಿನ ಅಲ್ಪಸಂಖ್ಯಾಕರಾದ ಹಿಂದೂಗಳ ವಿರೋಧಿಯಾಗಿದೆ. ಬಾಂಗ್ಲಾದ ಹಿಂದೂಗಳು ಶಾಂತಿಯಿಂದ ಬದುಕಲು ಅವಕಾಶ ನೀಡಬೇಕು. ಇಲ್ಲವಾದರೆ ಮುಂದಿನ ಪರಿಣಾಮಗಳಿಗೆ ಬಾಂಗ್ಲಾ ಸರಕಾರವೇ ಹೊಣೆಯಾಗುತ್ತದೆ. ಬಂಧಿತರನ್ನು ಭೇಷರತ್ತಾಗಿ ಬಿಡುಗಡೆ ಗೊಳಿಸಬೇಕು ಎಂದು ಹೇಳಿದರು.
ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಇಸ್ಕಾನ್ ನ ಪ್ರೇಮಭಕ್ತಿ ಪ್ರಭು , ಓಂ ಶ್ರೀ ಮಠದ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಇಸ್ಕಾನ್ ನ ಸಚ್ಚಿದಾನಂದ ಅದ್ವೈತ ದಾಸ, ಪ್ರಮುಖರಾದ ಗೋಪಾಲ್ ಕುತ್ತಾರ್, ಎಚ್. ಕೆ ಪುರುಷೋತ್ತಮ್ ಜೋಗಿ, ಕೃಷ್ಣ ಪ್ರಸನ್ನ, ಶಿವಾನಂದ ಮೆಂಡನ್, ಪೊಳಲಿ ಗಿರಿಪ್ರಕಾಶ್ ತಂತ್ರಿ, ಭುಜಂಗ ಕುಲಾಲ್ ಪುನೀತ್ ಅತ್ತಾವರ, ಶರಣ್ ಪಂಪ್ ವೆಲ್, ಗಣೇಶ್ ಪೊದುವಾಳ್, ಶಕೀಲಾ ಕಾವಾ, ಪ್ರೇಮಾನಂದ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.