
‘ತ್ಯಾಗಭರಿತ ಸಮರ್ಪಿತ ಜೀವನವೇ ರಾಷ್ಟ್ರದ ರಕ್ಷಣೆಗೆ ಅಡಿಪಾಯ’
ಮಂಗಳೂರು: ಭೋಗವನ್ನು ಮರೆತು ತ್ಯಾಗವನ್ನು ಮೆರೆದ ಜೀವನವನ್ನು ನಡೆಸಿದಾಗ ಮಾತ್ರ ಸುಸಂಸ್ಕೃತವಾದ ಬಲಿಷ್ಠ ಸಮಾಜ ನಿರ್ಮಾಣವಾಗುವುದರ ಜೊತೆಗೆ ರಾಷ್ಟ್ರದ ರಕ್ಷಣೆಗೆ ಹಾಗೂ ಅಭ್ಯುದಯಕ್ಕೆ ಒಂದು ಭದ್ರವಾದ ಅಡಿಪಾಯವು ರೂಪುಗೊಳ್ಳಲು ಸಾಧ್ಯ ಎಂದು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಪ್ರವೀಣ್ ಮಾರ್ಟಿಸ್ ಹೇಳಿದರು. ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ವತಿಯಿಂದ 2008ರ ಮುಂಬಿಯ ನಗರದ ಮೇಲೆ ಭಯೋತ್ಪಾದನಾ ದಾಳಿ ನಡೆದಾಗ ಭಯೋತ್ಪಾದಕರನ್ನು ಮಟ್ಟಹಾಕಿ ದೇಶವನ್ನು ರಕ್ಷಿಸುವ ಮಹತ್ಕಾರ್ಯದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲು ಕಳೆದ ಸಂಜೆ ಆಯೋಜಿಸಲ್ಪಟ್ಟ 16ನೇ ವರ್ಷದ ಅಸುವು ರಾಷ್ಟ್ರ ಸಮರ್ಪಿತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮಾಜಿ ಸೈನಿಕನ ಮಗನಾದ ತನಗೆ ಸೈನಿಕನಾಗಬೇಕೆಂಬ ಆಸೆ ಇದ್ದರೂ ಅದು ಸಾಧ್ಯವಾಗದೇ ಇದ್ದಾಗ ಸೈನಿಕರನ್ನು ಹಾಗೂ ದೇಶ ರಕ್ಷಣೆಗೆ ಸಿದ್ಧರಾಗುವ ಯುವ ಜನರನ್ನು ನಿರ್ಮಾಣ ಮಾಡುವ ಶಿಕ್ಷಣ ಕ್ಷೇತ್ರದಲ್ಲಿ ಸೈನಿಕನಾಗಿ ದುಡಿಯುವ ಸೌಭಾಗ್ಯ ದೊರಕಿದೆ. ಇದು ನನ್ನ ಪಾಲಿನ ಪುಣ್ಯ ಎಂದು ಭಾವಿಸುತ್ತೇನೆ. ಭಾರತೀಯ ವಾಯುಸೇನೆಯಲ್ಲಿ ಅಧಿಕಾರಿಯಾಗಿರುವ ತನ್ನ ಸಹೋದರನನ್ನು ನೆನಪಿಸಿದ ಅವರು ಸೈನಿಕರ ಕುಟುಂಬವೆಂದರೆ ಅದು ಅತ್ಯಂತ ಗೌರವಯುತ ಹಾಗೂ ಶಿಸ್ತಿನ ಕುಟುಂಬವಾಗಿ ಸಮಾಜ ಗುರುತಿಸುತ್ತದೆ ಎಂದು ಹೇಳಿದರು.
ಉದ್ಘಾಟಿಸಿದ ಭಾರತೀಯ ನೌಕಾದಳದ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ತನ್ನ ಸ್ವಂತ ಊರಿನಲ್ಲಿ ಇಂತಹ ಒಂದು ಪುಣ್ಯ ಹಾಗೂ ಭಾವನಾತ್ಮಕ ಕಾರ್ಯಕ್ರಮದಲ್ಲಿ ದೀಪಬೆಳಗಿಸಲು ಅವಕಾಶ ಸಿಕ್ಕಿರುವುದು ನನ್ನ ಜೀವನದ ಅತ್ಯಪೂರ್ವ ಕ್ಷಣ ಎಂದರು ಹಾಗೂ ಸಂಘಟಕರ ಕಾರ್ಯವನ್ನು ಶ್ಲಾಘಿಸಿದರು. ನುಡಿನಮನ ಸಲ್ಲಿಸಿದ ೧೮ನೇ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಇದರ ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಗ್ರೇಷಿಯನ್ ಸಿಕ್ವೇರಾ ಮಾತನಾಡಿ ಸೇನೆ ಹಾಗೂ ಸೈನಿಕರ ಬಗ್ಗೆ ಕಾಳಜಿಯನ್ನು ವಹಿಸಿ ಯುವಜನರಲ್ಲಿ ರಾಷ್ಟ್ರಭಕ್ತಿ ಹಾಗೂ ರಾಷ್ಟ್ರ ಜಾಗೃತಿಯನ್ನು ಮೂಡಿಸುವ ಇಂತಹ ಕಾರ್ಯಕ್ರಮಗಳು ನಿಜಕ್ಕೂ ಸಮಾಜ ನಿರ್ಮಾಣಕ್ಕೆ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗಿವೆ ಎಂದರು.
ದಿಕ್ಷೂಚಿ ಭಾಷಣ ಮಾಡಿದ ಎಂ.ಐ.ಟಿ.ಯ ಅಸೋಸಿಯೇಟ್ ಪ್ರೊ. ವಾದಿರಾಜ್ ಗೋಪಾಡಿಯವರು ಮಾತನಾಡಿ ಹಿಂದು ಕ್ರೈಸ್ತ ಮುಸಲ್ಮಾನ ಎಂಬ ಭೇದವಿಲ್ಲದೆ, ಮಂದಿರ, ಮಸೀದಿ, ಚರ್ಚ್ ಎಂಬ ಅಂತರವಿಲ್ಲದೆ ಸಮಾಜದ ಎಲ್ಲಾ ಸಮುದಾಯ ಜಾತಿಬಂಧುಗಳನ್ನು ಒಂದುಗೂಡಿಸಿ ಹುತಾತ್ಮರಿಗಾಗಿ ಪುಷ್ಪಾರ್ಚನೆ ಮಾಡುವುದರ ಮೂಲಕ ನಮನ ಸಲ್ಲಿಸುತ್ತಿರುವುದು ಇಡೀ ದೇಶಕ್ಕೆ ಒಂದು ಮಾದರಿ ಕಾರ್ಯಕ್ರಮ. ಈ ಕಾರ್ಯಕ್ರಮ ಒಂದು ರಾಷ್ಟ್ರ-ಒಂದು ಕುಟುಂಬ ಎಂಬ ಪರಿಕಲ್ಪನೆಯ ಭಾಗವೆಂದರು.
ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶೇಶಪ್ಪ ಕೆ., ಕೆ.ಸಿ.ಸಿ.ಐ. ಅಧ್ಯಕ್ಷ ಆನಂದ್ ಜಿ. ಪೈ ಹಾಗೂ ನಗರದ ಯುರೊಲಾಜಿಸ್ಟ್ ಡಾ. ನಿಶ್ಚಿತ್ ಡಿ’ಸೋಜ ಮಾತನಾಡಿದರು. ನ್ಯಾಯವಾದಿ ಬಿ. ನಯನ ಪೈ ಸಂವಿಧಾನದ ಪೀಠಿಕೆಯನ್ನು ಓದಿ ಪ್ರತಿಜ್ಞಾ ವಿಧಿಯನ್ನು ನಡೆಸಿಕೊಟ್ಟರು. ವಿದುಷಿ ಸೌಮ್ಯ ಸುಧೀಂದ್ರ ರಾವ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಮೊದಲು ಹುತಾತ್ಮ ಸ್ಮಾರಕಕ್ಕೆ ಪುಷ್ಪಾರ್ಚನೆಯನ್ನು ಮಾಡಿ ನಮನ ಸಲ್ಲಿಸಿ ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್ ಇದರ ಸದಸ್ಯರಿಂದ ಉಘೇ ವೀರಭೂಮಿಗೆ ಎಂಬ ರ‍್ಯಾಲಿಗೆ ಚಾಲನೆಯನ್ನು ನೀಡಲಾಯಿತು. ಸಾಹುಕಾರ್ ಎಂ. ಕಿರಣ್ ಪೈ, ಎ.ನಜ್ಮಾ ಫಾರೂಖಿ, ಸುರೇಶ್ ಕಾಮತ್ (ಎಸ್.ವಿ.ಕೆ.), ರೋಶನ್ ಡಿ’ಸೋಜ ಅಶೋಕನಗರ, ಪ್ರವೀಣ್ ಕುಮಾರ್ ಮಣ್ಣಗುಡ್ಡೆ, ಯೋಗೀಶ್ ಆಚಾರ್, ಅಹಮ್ಮದ್ ಶರೀಫ್ (ಫಾತಿಮಾ ಟ್ರೇಡರ‍್ಸ್), ಲೀನಾ ಡಿ’ಸಿಲ್ವ, ನವೀನ್ ಫೆರ್ನಾಂಡಿಸ್ ಕುಲಶೇಖರ, ಅರುಣ್ ಬ್ಯಾಪ್ಟಿಸ್ಟ್, ಮಹೇಶ್ ಕುಮಾರ್, ಆನಂದ ಶೆಟ್ಟಿ ಉಪಸ್ಥಿತರಿದ್ದರು. 85ರ ಹರೆಯದ ಮಾಜಿ ಯೋಧ ಗೋಪಾಲಕೃಷ್ಣ ಶೆಣೈಯವರು ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಇಟ್ಟು ಪ್ರಣಾಮ ಸಲ್ಲಿಸಿದ್ದು ಎಲ್ಲರ ಶ್ಲಾಘನೆಗೆ ಪಾತ್ರವಾಯಿತು. ವಿವಿಧ ಕಾಲೇಜುಗಳ ಎನ್.ಸಿ.ಸಿ. ಕೆಡೆಟ್‌ಗಳು, ಎನ್.ಎಸ್.ಎಸ್. ಸ್ವಯಂಸೇವಕರು, ಕ್ರೀಡಾಪಟುಗಳು ಹುತಾತ್ಮರಿಗೆ ಪುಷ್ಪ ನಮನವನ್ನು ಸಲ್ಲಿಸಿದರು. ಜೊತೆಯಲ್ಲಿ ಪ್ರಸ್ತುತ ದೇಶದ ವಿವಿಧ ಭಾಗಗಳಲ್ಲಿ ಸೇನೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಸೇನಾಧಿಕಾರಿಗಳ ಮಾತಾಪಿತರು ಹಾಗೂ ಕುಟುಂಬಿಕರು ಉಪಸ್ಥಿತರಿದ್ದು ಪುಷ್ಪ ನಮನವನ್ನು ಸಲ್ಲಿಸಿದರು. ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸ್ಥಾಪಕ ಫ್ರ್ಯಾಂಕ್ಲಿನ್ ಮೊಂತೆರೊ ಸ್ವಾಗತಿಸಿ ಪ್ರಸ್ತಾವನೆಗೈದರು. ಮೇವಿಸ್ ರಾಡ್ರಿಗಸ್ ಕದ್ರಿ ಮಲ್ಲಿಕಟ್ಟೆ ವಂದನಾರ್ಪಣೆ ಗೈದರು. ಅರುಣ್ ಶೇಟ್ ಕಾರ್ಯಕ್ರಮ ನಿರ್ವಹಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.