
ಮನೆ ಕಳ್ಳತನ ಪ್ರಕರಣದ ಆರೋಪಿಯ ಸರೆ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ
ಮೂಲ್ಕಿ: ಮಂಗಳೂರು ನಗರದ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಬಿಜಾಪುರ ಕಾಲನಿ ಎಂಬಲ್ಲಿ ಮನೆಯೊಂದರಿಂದ ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಯನ್ನು ಮೂಲ್ಕಿ ಪೊಲೀಸರು ದಸ್ತಗಿರಿ ಮಾಡಿ ಕಳ್ಳತನ ಮಾಡಿದ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಮೂಲ್ಕಿಯ ಲಿಂಗಪ್ಪಯ್ಯಕಾಡು, ಕಾರ್ನಾಡು ಗ್ರಾಮದ ನಿವಾಸಿ ಅರುಣ್ (20) ಎಂದು ಗುರುತಿಸಲಾಗಿದೆ.
ನ.6 ರಂದು ಹಗಲು ವೇಳೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಬಿಜಾಪುರ ಕಾಲನಿ ಎಂಬಲ್ಲಿರುವ ಮಲ್ಲಮ್ಮ ಎಂಬವರ ಮನೆಯ ಹಿಂಬಾಗಿಲಿನ ಬೀಗವನ್ನು ತೆರೆದು ಮನೆಯ ಒಳಗಿದ್ದ ಸುಮಾರು 64,200 ಗ್ರಾಂ. ತೂಕದ ಚಿನ್ನಾಭರಣಗಳನ್ನು ಕಳವು ಮಾಡಿದ ಬಗ್ಗೆ ಮೂಲ್ಕಿ ಠಾಣೆಗೆ ನ.7 ರಂದು ಮಲ್ಲಮ್ಮ ನೀಡಿದ ದೂರಿನಂತೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಂಧಿತ ಆರೋಪಿಯಿಂದ 29 ಗ್ರಾಂ ಚಿನ್ನದ ಗುಂಡು ಸರ-1, 11 ಗ್ರಾಂನ ಚಿನ್ನದ ನೆಕ್ಲೀಸ್!, 11 ಗ್ರಾಂನ ಚಿಕ್ಕ ಕರಿಮಣಿ ಸರ-1, 3 ಗ್ರಂನ 1 ಜೊತೆ ಕಿವಿಯ ಜುಮುಕಿ, 2 ಗ್ರಾಂನ 1 ಜೊತೆ ಕಿವಿಯ ಸಣ್ಣ ಮಾಟಿ, 1.500 ಗ್ರಾಂನ 1 ಜೊತ ಸಣ್ಣ ಕಿವಿಯೋಲೆ, 5 ಗ್ರಾಂನ ಒಂದು ಸಣ್ಣ ಉಂಗುರ, 0.600 ಗ್ರಾಂನ ಒಂದು ಪೆಂಡೆಂಟ್, 0.500 ಗ್ರಾಂನ ತಾಳಿಗೆ ಹಾಕುವ 6 ಗುಂಡು, 0.600 ಗ್ರಾಂನ 1 ಜೊತೆ ಕಿವಿಗೆ ಹಾಕುವ ಸಣ್ಣ ರಿಂಗ್ ಕಳವಾಗಿದ್ದು, ಕಳವಾದ ಚಿನ್ನಾಭರಣಗಳ ಒಟ್ಟು ತೂಕ 64,200 ಆಗಿದ್ದು ಅದರ ಒಟ್ಟು ಮೌಲ್ಯ 2,56,000 ರೂ. ಎಂದು ಅಂದಾಜಿಸಲಾಗಿದೆ.
ಈ ಪತ್ತೆ ಕಾರ್ಯವನ್ನು ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್, ದಿನೇಶ್ ಕುಮಾರ್ ಅವರ ನಿರ್ದೇಶನದಂತೆ, ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ. ಶ್ರೀಕಾಂತ್ ಅವರ ನೇತೃತ್ವದಲ್ಲಿ ಮೂಲ್ಕಿ ಠಾಣಾ ನಿರೀಕ್ಷಕ ವಿದ್ಯಾಧರ ಡಿ. ಬಾಯ್ಕರಿಕರ್ ಅವರು ಕಾರಚರಣೆ ನಡೆಸಿದ್ದು, ಮೂಲ್ಕಿ ಪೊಲೀಸ್ ಠಾಣೆಯ ಪಿ.ಎಸ್.ಐ. ಅನಿತಾ ಹೆಚ್.ಬಿ, ಎ.ಎಸ್.ಐ ಹರಿಶೇಖರ್, ಹೆಡ್ ಕಾನ್‌ಸ್ಟೇಬಲ್ ಶಶಿಧರ, ಚಂದ್ರಶೇಖರ್, ಜಾಯ್ಸ್ ಸುಚಿತಾ ಡಿ’ಸೋಜ, ಕಾನ್‌ಸ್ಟೇಬಲ್‌ಗಳಾದ ಸುನೀಲ್ ಮತ್ತು ಮ.ಪಿ.ಸಿ. ಚಿತ್ರಾ ಅವರು ಭಾಗವಹಿಸಿದ್ದರು.