
ಆಕ್ಸೆಂಚರ್ ಕಂಪನಿಗೆ ಕ್ಯಾಂಪಸ್ ನೇಮಕಾತಿಯಲ್ಲಿ ಸಂತ ಫಿಲೋಮಿನಾ ಕಾಲೇಜಿನ 12 ವಿದ್ಯಾರ್ಥಿಗಳು ಆಯ್ಕೆ
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ 12 ವಿದ್ಯಾರ್ಥಿಗಳು ಬಹುರಾಷ್ಟ್ರೀಯ ಐಟಿ ಕಂಪನಿ ಆಕ್ಸೆಂಚರ್ಗೆ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯ ಮೂಲಕ ಆಯ್ಕೆಯಾಗಿದ್ದಾರೆ.
ಎರಡು ತಿಂಗಳುಗಳ ಹಿಂದೆ ಕಾಲೇಜಿನಲ್ಲಿ ಆಕ್ಸೆಂಚರ್ ಕಂಪನಿಯ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. 2 ಬ್ಯಾಚ್ಗಳಲ್ಲಿ ನಡೆದ ಲಿಖಿತ ಪರೀಕ್ಷೆಯಲ್ಲಿ 30ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಮುಂದಿನ ಹಂತಗಳಿಗೆ ಆಯ್ಕೆ ಮಾಡಲಾಗಿತ್ತು. ನಂತರ ಅವರಿಗೆ ಸಂವಹನ ಹಾಗೂ ಸಂದರ್ಶನ ನಡೆಸಲಾಗಿದ್ದು ಅಂತಿಮವಾಗಿ 12 ವಿದ್ಯಾರ್ಥಿಗಳಿಗೆ ಲೆಟರ್ ಆಫ್ ಇಂಟೆಂಟ್ ನೀಡಲಾಗಿದೆ. ಅವರ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನೇಮಕಾತಿ ಪತ್ರವನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.
ತೃತೀಯ ಬಿಸಿಎಯ ನಿಶ್ಮಿತ್ ಎಸ್.ಆರ್., ಸ್ಕಂದ ಎಸ್.ಎನ್., ಮೆಲಿಶಾ ಡಿ’ಸೋಜ, ಜೀವನ್ ಕುಮಾರ್, ಟಿ.ಆರ್. ಅನುಷಾ ಭಾರ್ಗವಿ, ಹವ್ಯಾಸ್ ಯು., ಹಾಗೂ ಸಹನ ದೀಪ್ತಿ, ತೃತೀಯ ಬಿಬಿಎಯಲ್ಲಿ ವ್ಯಾಸಂಗ ಮಾಡುತ್ತಿರುವ ಚಮನ್ ಪ್ರವೀಣ್, ಅಂತಿಮ ಬಿಕಾಂನ ಸಿಮ್ರನ್ ತಾಜ್, ಹವ್ಯಶ್ರೀ ಹಾಗೂ ಅಂತಿಮ ವರ್ಷದ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ತನ್ವಿ ಎಂ. ರೈ ಆಯ್ಕೆಯಾದ ವಿದ್ಯಾರ್ಥಿಗಳು.
‘ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ಆಕ್ಸೆಂಚರ್ ಪ್ಲೇಸ್ಮೆಂಟ್ ಡ್ರೈವ್ನಲ್ಲಿ ನಮ್ಮ 12 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಲು ಸಂತಸವಾಗುತ್ತಿದೆ. ಈ ಗಮನಾರ್ಹ ಸಾಧನೆಯು ನಮ್ಮ ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವ ಮತ್ತು ನಮ್ಮ ಸಂಸ್ಥೆಯಲ್ಲಿ ಒದಗಿಸಲಾದ ಶಿಕ್ಷಣದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ತಮ್ಮ ವೃತ್ತಿಜೀವನದಲ್ಲಿ ಈ ಮೈಲಿಗಲ್ಲು ಸಾಧಿಸಿದ್ದಕ್ಕಾಗಿ ನಾನು ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರ ಯಶಸ್ಸು ಅವರ ಪರಿಶ್ರಮ ಮತ್ತು ನಮ್ಮ ಅಧ್ಯಾಪಕರು ನೀಡಿರುವ ಬೆಂಬಲ ಹಾಗೂ ಮಾರ್ಗದರ್ಶನವನ್ನು ಪ್ರತಿಬಿಂಬಿಸುತ್ತದೆ. ನಮ್ಮ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಗುರುತಿಸಿ ಮತ್ತು ಅವರಿಗೆ ತಮ್ಮ ವೃತ್ತಿಜೀವನದ ಮೊದಲ ಹೆಜ್ಜೆಯನ್ನಿಡುವ ಅವಕಾಶವನ್ನು ಒದಗಿಸಿದ್ದಕ್ಕಾಗಿ ಆಕ್ಸೆಂಚರ್ಗೆ ನಮ್ಮ ಧನ್ಯವಾದಗಳು. ಒಂದು ವಿದ್ಯಾಸಂಸ್ಥೆಯಾಗಿ ಉತ್ಕೃಷ್ಟತೆಯನ್ನು ಬೆಳೆಸಲು ಮತ್ತು ಸ್ಪರ್ಧಾತ್ಮಕ ಪರಿಸರದಲ್ಲಿ ನಮ್ಮ ವಿದ್ಯಾರ್ಥಿಗಳನ್ನು ಮುಂಚೂಣಿಯಲ್ಲಿರುವಂತೆ ಮಾಡಲು ನಾವು ಸದಾ ಬದ್ಧರಾಗಿದ್ದೇವೆ. ಈ ಸಾಧನೆಯು ನಮ್ಮ ಎಲ್ಲಾ ವಿದ್ಯಾರ್ಥಿಗಳಿಗೆ ಉನ್ನತ ಗುರಿಯನ್ನು ಹೊಂದಲು ಮತ್ತು ಅವರ ಕನಸುಗಳನ್ನು ನನಸಾಗಿಸುವಲ್ಲಿ ಕಾರ್ಯಪ್ರವೃತ್ತರಾಗಲು ಪ್ರೇರೇಪಿಸಲಿ. ಮುಂಬರುವ ದಿನಗಳಲ್ಲಿ ಕಾಲೇಜಿನಲ್ಲಿ ಕ್ಯಾಂಪಸ್ ನೇಮಕಾತಿಗೆ ಸಂಬಂಧಿಸಿದಂತಹ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು’ ಎಂದು ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಹೇಳಿದ್ದಾರೆ.