
ಕುಕ್ಕೆ: ಶ್ರೀ ದೇವಳದಲ್ಲಿ ಅಹರ್ನಿಶಿ ನಡೆದ ಅಖಂಡ ಭಜನೋತ್ಸವ ಸಂಪನ್ನ
ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ದೇವಳದ ನಡೆದ ಅಖಂಡ ಭಜನೋತ್ಸವ ಗುರುವಾರ ಮುಂಜಾನೆ ಸಂಪನ್ನಗೊಂಡಿತು. ಬುಧವಾರ ಸೂರ್ಯೋದಯದಿಂದ ಗುರುವಾರ ಸೂರ್ಯೋದಯದ ತನಕ ಭಜನೆ ನೆರವೇರಿತು.ಈ ಮೂಲಕ ನಿರಂತರ 24 ಗಂಟೆಗೂ ಅಧಿಕ ಕಾಲ ಕುಕ್ಕೆ ದೇವಳದಲ್ಲಿ ಭಗವನ್ನಾಮ ಸ್ಮರಣೆ ಮೇಳೈಸಿತು. ಗುರುವಾರ ಮುಂಜಾನೆ ಸ್ಥಳೀಯ ಭಜಕರ ತಂಡದ ಸದಸ್ಯರು ಅಂತಿಮವಾಗಿ ಭಜನಾ ಸೇವೆ ನೆರವೇರಿಸಿದರು. ಅಂತಿಮವಾಗಿ ನಿವೃತ್ತ ಮುಖ್ಯಗುರು ಕೆ.ಯಶವಂತ ರೈ ಭಜನೋತ್ಸವಕ್ಕೆ ಮಂಗಳ ಹಾಡಿದರು. ನಿರಂತರವಾಗಿ ನಡೆದ ಭಜನೆಯಲ್ಲಿ ಸುಮಾರು ೨೪ ತಂಡಗಳು ಭಜನೆ ಮತ್ತು ಕುಣಿತ ಭಜನಾ ಸೇವೆ ನೆರವೇರಿಸಿತು.
ತಂಡಗಳು..
ಭಜನೆಯಲ್ಲಿ ಕ್ರಮವಾಗಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರರ ವೃಂದ, ಶ್ರೀ ವಿದ್ಯಾಸಾಗರ ಭಜನಾ ಸಂಗಮ ಸುಬ್ರಹ್ಮಣ್ಯ, ಶ್ರೀವಲ್ಲಿ ಮಹಿಳಾ ಭಜನಾ ಮಂಡಳಿ ಸುಬ್ರಹ್ಮಣ್ಯ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಜ್ಯೋತಿಗುಡ್ಡೆ ಬಂಟ್ವಾಳ, ಉಮಾಮಹೇಶ್ವರಿ ಮಹಿಳಾ ಭಜನಾ ಮಂಡಳಿ ಬಲ್ಯ, ಅನುಪಮ ಶೆಣೈ ಬಳಗ ಮೂಡಬಿದ್ರೆ, ಗಾನಸಿರಿ ಕಲಾಕೇಂದ್ರ ಬೊಳ್ವಾರ್, ವನಿತಾ ಸಮಾಜ ಪಂಜ, ಭಜನಾಮೃತ ಭಜನಾ ಮಂಡಳಿ ಕಡಬ, ಶ್ರೀ ಸಿಂಧೂರ ಮಹಿಳಾ ಭಜನಾ ಮಂಡಳಿ ಆರ್ಲಪದವು, ನಂದನ ಕಲಾ ಕುಟುಂಬ ಮೆಟ್ಟಿನಡ್ಕ, ಕುಕ್ಕೆಶ್ರೀ ಸುಬ್ರಹ್ಮಣ್ಯ ಮಹಿಳಾ ಕುಣಿತ ಭಜನಾ ತಂಡ, ಕಲಾವಿದ ಕೆ.ಯಜ್ಞೇಶ್ ಆಚಾರ್ ಮತ್ತು ಬಳಗ, ಸ್ನೇಹಾಂಜಲಿ ಮಕ್ಕಳ ಕುಣಿತ ಭಜನಾ ತಂಡ ಬೆಳ್ಳಾರೆ, ರಾಮಾಂಜನೇಯ ಭಜನಾ ತಂಡ ಕಾರ್ಲ, ಶ್ರೀ ಬಸವೇಶ್ವರ ಮಕ್ಕಳ ಕುಣಿತ ಭಜನಾ ತಂಡ ಕುಲ್ಕುಂದ, ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ಕಡಬ, ವಿಘ್ನೇಶ್ವರ ಭಜನಾ ಮಂಡಳಿ ನೆಟ್ಟಣ, ಕುಕ್ಕೆಶ್ರೀ ಭಜನಾ ತಂಡ ಸುಬ್ರಹ್ಮಣ್ಯ, ರಘು ಬಿಜೂರು ಬಳಗ ಸುಬ್ರಹ್ಮಣ್ಯ, ಸಿಗಂಧೇಶ್ವರಿ ಭಜನಾ ಮಂಡಳಿ ಸಿಗಂದೂರು, ಶ್ರೀ ದುರ್ಗಾ ಭಜನಾ ಮಂಡಳಿ ಮರಕತ, ಸ್ಥಳೀಯ ಭಜಕರ ವೃಂದ ಸುಬ್ರಹ್ಮಣ್ಯ ಇವರಿಂದ ಸೇವೆ ನೆರವೇರಿತು. ಸೇವೆ ನೆರವೇರಿಸಿದ ತಂಡಗಳಿಗೆ ಶ್ರೀ ದೇವಳದಿಂದ ದೇವರ ಪ್ರಸಾದ ನೀಡಿ ಅನುಗ್ರಹ ಪತ್ರದೊಂದಿಗೆ ಗೌರವಾರ್ಪಣೆ ನೆರವೇರಿಸಲಾಯಿತು.
ವೈರಲ್ ಆದ ಕುಣಿತ ಭಜನೆ:
ಶ್ರೀ ದೇವಳದಲ್ಲಿ ಅಹರ್ನಿಶಿ ಭಜನಾ ಕಾರ್ಯಕ್ರಮದಲ್ಲಿ ಭಕ್ತರು ಪ್ರದರ್ಶಿಸಿದ ಕುಣಿತ ಭಜನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸರ್ವರ ಶ್ಲಾಘನೆಗೆ ಪಾತ್ರವಾಗಿತ್ತು.