
ಕುಕ್ಕೆ ಕ್ಷೇತ್ರದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಆರಂಭ
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಾರ್ತಿಕ ಬಹುಳ ದ್ವಾದಶಿಯಾದ ಬುಧವಾರ ಕೊಪ್ಪರಿಗೆ ಏರುವುದರ ಮೂಲಕ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಆರಂಭವಾಯಿತು.
ಎಲ್ಲಾ ಕ್ಷೇತ್ರಗಳಲ್ಲಿ ಕೊಡಿ ಏರುವುದರ ಮೂಲಕ ಜಾತ್ರೆ ಆರಂಭವಾದರೆ, ಕುಕ್ಕೆ ಕ್ಷೇತ್ರದಲ್ಲಿ ಮಾತ್ರ ಕೊಪ್ಪರಿಗೆ ಏರುವುದರೊಂದಿಗೆ ವಾರ್ಷಿಕ ಜಾತ್ರೋತ್ಸವ ಪ್ರಾರಂಭಗೊಂಡಿದೆ. ಮುಂಜಾನೆ 7.42ರ ವೃಶ್ಚಿಕ ಲಗ್ನ ಸುಮೂಹುರ್ತದಲ್ಲಿ ಅವಳಿ ಕೊಪ್ಪರಿಗೆಗಳನ್ನು ಏರಿಸಲಾಯಿತು. ಪೂರ್ವಶಿಷ್ಠ ಸಂಪ್ರದಾಯದಂತೆ ದೇವಳದ ಪ್ರಧಾನ ಅರ್ಚಕ ವೇ.ಮೂ. ಸೀತಾರಾಮ ಎಡಪಡಿತ್ತಾಯರು ವಿವಿಧ ವೈಧಿಕ ವಿದಿ ವಿಧಾನಗಳನ್ನು ನೆರವೇರಿಸಿದರು.
ಆರಂಭದಲ್ಲಿ ಪ್ರಧಾನ ಅರ್ಚಕರು ರಾಮಲಕ್ಷ್ಮಣ ಎಂಬ ಹೆಸರಿನ ಜೋಡಿ ಅನ್ನದ ಕೊಪ್ಪರಿಗೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಳದ ಒಳಾಂಗಣದಲ್ಲಿರುವ ದೊಡ್ಡದಾದ ಎರಡು ಒಲೆಗಳ ಮೇಲೆ ಅನ್ನದಾನದ ಸಂಕೇತವಾದ ಕೊಪ್ಪರಿಗೆಗಳನ್ನು ಏರಿಸಲಾಯಿತು.
ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಾಸ್ಟರ್‌ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಅಚ್ಚುತ ಆಲ್ಕಬೆ, ಕಚೇರಿ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್ ಸೇರಿದಂತೆ ದೇವಳದ ಸಿಬ್ಬಂಧಿಗಳು, ಭಕ್ತರು ಉಪಸ್ಥಿತರಿದ್ದರು.
ಡಿ.7ಕ್ಕೆ ಚಂಪಾಷಷ್ಠಿ ಮಹಾರಥೋತ್ಸವ:
ನ.28 ಮತ್ತು 29ರಂದು ಶೇಷ ವಾಹನಯುಕ್ತ ಬಂಡಿ ಉತ್ಸವ, ನ.30 ರಂದು ಲಕ್ಷದೀಪೋತ್ಸವ ನಡೆಯಲಿದೆ. ಡಿ.1 ರಂದು ಶೇಷವಾಹನೋತ್ಸವ, ಡಿ.2 ರಂದು ಅಶ್ವವಾಹನೋತ್ಸವ, ಡಿ.3 ರಂದು ಮಯೂರ ವಾಹನೋತ್ಸವ ನಡೆಯಲಿದೆ. ಡಿ.4 ರಂದು ಶೇಷ ವಾಹನೋತ್ಸವ, ಡಿ.5 ರಂದು ಚೌತಿ ಹೂವಿನ ತೇರಿನ ಉತ್ಸವ, ಡಿ.6 ರಂದು ಮಾರ್ಗಶಿರ ಶುದ್ಧ ಪಂಚಮಿ ದಿನ ತೈಲಾಭ್ಯಂಜನ, ರಾತ್ರಿ ಪಂಚಮಿ ರಥೋತ್ಸವ ನೆರವೇರಲಿದೆ. ಡಿ.7 ಮಾರ್ಗಶಿರ ಶುದ್ಧ ಷಷ್ಠಿ ಬೆಳಗ್ಗೆ ಚಂಪಾಷಷ್ಠಿ ಮಹಾರಥೋತ್ಸವ ನಡೆಯಲಿದೆ. ಡಿ.8 ಅವಭೃತೋತ್ಸವ ಮತ್ತು ನೌಕವಿಹಾರ, ಡಿ.12 ಕೊಪ್ಪರಿಗೆ ಇಳಿಯುವುದರ ಮೂಲಕ ಜಾತ್ರೋತ್ಸವ ಸಮಾಪನಗೊಳ್ಳಲಿದೆ. ಈ ದಿನ ರಾತ್ರಿ ನೀರಿನಲ್ಲಿ ಬಂಡಿ ಉತ್ಸವ ನೆರವೇರಲಿದೆ. ಅಲ್ಲದೆ ಪುರುಷರಾಯ, ಹೊಸಳಿಗಮ್ಮ ಹಾಗೂ ಪರಿವಾರ ದೈವಗಳ ನಡಾವಳಿ ನಡೆಯಲಿದೆ.