ನಕ್ಸಲ್ ವಿಕ್ರಮ್ ಜೊತೆಗಿದ್ದವರಿಗಾಗಿ ಶೋಧ

ನಕ್ಸಲ್ ವಿಕ್ರಮ್ ಜೊತೆಗಿದ್ದವರಿಗಾಗಿ ಶೋಧ

ಉಡುಪಿ: ವಿವಿಧ ಪ್ರಕರಣಗಳಿಗಾಗಿ ಪೊಲೀಸರಿಗೆ ಬೇಕಾಗಿದ್ದ ನಕ್ಸಲ್ ವಿಕ್ರಮ್ ಗೌಡ ನಕ್ಸಲ್ ನಿಗ್ರಹ ಪಡೆಯ ಗುಂಡಿಗೆ ಬಲಿಯಾದ ಸಂಸದರ್ಭ ಆತನ ಜೊತೆಗಿದ್ದ ಇತರ ನಕ್ಸಲರು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪಶ್ಚಿಮ ಘಟ್ಟದ ದಟ್ಟಕಾಡಿನಲ್ಲಿ ಎನ್‌ಎನ್‌ಎಫ್ ತಂಡ ಶೋಧ ಕಾರ್ಯ ಮುಂದುವರಿಸಿದೆ. ಈಮಧ್ಯೆ, ವಿಕ್ರಮ್ ಗೌಡ ಎನ್‌ಕೌಂಟರ್ ನಡೆದ ಜಾಗಕ್ಕೆ ಬೆಂಗಳೂರಿನ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿದೆ.

ವಿಕ್ರಮ್ ಗೌಡ ಜೊತೆಗಿದ್ದ ನಕ್ಸಲರು ಪರಾರಿಯಾಗಿರುವುದು ಪೀತಬೈಲ್ ಸೇರಿದಂತೆ ಪರಿಸರದ ಜನರ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಎಎನ್‌ಎಫ್ ಕೂಂಬಿಂಗ್ ಕಾರ‍್ಯಾಚರನೆ ತೀವ್ರಗೊಳಿಸಿದೆ. ತಪ್ಪಿಸಿಕೊಂಡ ನಕ್ಸಲರ ಜಾಡು ಹಿಡಿದು ಶೋಧ ಕಾರ್ಯ ನಡೆಸುತ್ತಿರುವ ಎಎನ್‌ಎಫ್ ಹಿರಿಯ ಅಧಿಕಾರಿಗಳು ಕಬ್ಬಿನಾಲೆ, ಪೀತಬೈಲ್, ನಾಡ್ಪಾಲು, ಕೂಡ್ಲು ಅರಣ್ಯವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದಾರೆ. ಕಾಡಿಗೆ ಹೋಗದಂತೆ ಸ್ಥಳೀಯ ನಿವಾಸಿಗಳಿಗೆ ಸೂಚಿಸಲಾಗಿದೆ.

ಕಬ್ಬಿನಾಲೆ ಅರಣ್ಯ ವ್ಯಾಪ್ತಿಗೆ ಪ್ರವೇಶಿಸುವ ಮುನ್ನ ನಕ್ಸಲರು ಉಡುಪಿ ಜಿಲ್ಲೆಯ ಈದು ಗ್ರಾಮ ದಕ್ಷಿಣ ಕನ್ನಡ ಜಿಲ್ಲೆಯ ಕುತ್ಲೂರು, ಕೊಡಗು-ದಕ್ಷಿಣ ಕನ್ನಡ ಗಡಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದರು. ಆ ಕಾರಣದಿಂದಾಗಿ ಆ ಭಾಗದ ಕಾಡುಗಳನ್ನೂ ಎಎನ್‌ಎಫ್ ಅಧಿಕಾರಿಗಳು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ನಕ್ಸಲ್ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ಈ ನಡುವೆ ನಕ್ಸಲರ ಶರಣಾಗತಿಗೂ ಸೂಚನೆ ನೀಡಲಾಗಿದೆ. ಶರಣಾಗದೆ ಹೋದಲ್ಲಿ ಕರಾವಳಿಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮತ್ತೆ ಗುಂಡಿನ ಸದ್ದು ಮರುಕಳಿಸುವ ಸಾಧ್ಯತೆ ಇದೆ. ಸರಕಾರ ಕೂಡ ನಕ್ಸಲರ ಶರಣಾಗತಿಗೆ ಸೂಚನೆ ನೀಡಿದೆ. ವಿಕ್ರಮ್ ಎನ್‌ಕೌಂಟರ್‌ನ್ನು ಸಿಎಂ ಸಿದ್ಧರಾಮಯ್ಯ ಸಮರ್ಥಿಸಿದರೆ, ವಿಕ್ರಮ್ ಮಾರಕಾಸ್ತ್ರ ಹೊಂದಿದ್ದು, ಪ್ರತಿದಾಳಿಯ ಸಾಧ್ಯತೆ ಹಿನ್ನೆಲೆಯಲ್ಲಿ ಎನ್‌ಕೌಂಟರ್ ಮಾಡಲಾಗಿದೆ ಎಂದು ಗೃಹಸಚಿವ ಡಾ. ಪರಮೇಶ್ವರ ತಿಳಿಸಿದ್ದಾರೆ. ಗುರುವಾರ ಕೊಲ್ಲೂರಿಗೆ ಭೇಟಿ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್ ಬಗ್ಗೆ ಪ್ರತಿಕ್ರಿಯಿಸಿ, ಜನತೆ ರಕ್ಷಣೆ ಸರ್ಕಾರದ ಹೊಣೆ ಎಂದಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article