ಸಾಹಿತ್ಯದಿಂದ ಧರ್ಮ ಮಾರ್ಗ ನಿರ್ಮಾಣ ಸಾಧ್ಯ: ಡಾ. ಪಾದೇಕಲ್ಲು ವಿಷ್ಣು ಭಟ್ಟ

ಸಾಹಿತ್ಯದಿಂದ ಧರ್ಮ ಮಾರ್ಗ ನಿರ್ಮಾಣ ಸಾಧ್ಯ: ಡಾ. ಪಾದೇಕಲ್ಲು ವಿಷ್ಣು ಭಟ್ಟ


ಧರ್ಮಸ್ಥಳ: ಸಾಹಿತ್ಯವು ಧರ್ಮವನ್ನು ನಿರ್ದೇಶಿಸಿ, ಪೋಷಿಸಿ, ವಿಮರ್ಶಿಸುವ ಮೂಲಕ ಸುಧಾರಣೆಯ ಕೆಲಸಗಳಿಗೆ ಕಾರಣವಾಗುತ್ತದೆ ಎಂದು ಹಿರಿಯ ಸಂಶೋಧಕ ಡಾ. ಪಾದೇಕಲ್ಲು ವಿಷ್ಣು ಭಟ್ಟ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ಶನಿವಾರ ಹಮ್ಮಿಕೊಳ್ಳಲಾಗಿದ್ದ 92ನೇ ಸಾಹಿತ್ಯ ಸಮ್ಮೇಳನದ ಅಧಿವೇಶನದಲ್ಲಿ ಅವರು ಅಧ್ಯಕ್ಷೀಯ ಮಾತುಗಳನ್ನಾಡಿದರು. 

ಸಾಹಿತ್ಯ ಮತ್ತು ಧರ್ಮವು ಒಂದರಿಂದ ಇನ್ನೊಂದು ವಿಮುಖವಾಗದೆ ಪರಸ್ಪರ ಪೂರಕವಾಗಿರಬೇಕು. ಧರ್ಮವು ತನ್ನ ಹಾದಿ ತಪ್ಪಿದಾಗ ಸರಿಪಡಿಸುವ ಕೆಲಸವನ್ನು ಸಾಹಿತ್ಯ ಮಾಡುತ್ತದೆ. ಪ್ರೇಮ ಮತ್ತು ಐಕ್ಯತೆಯನ್ನು ಎಲ್ಲರೊಳಗೆ ಮೂಡಿಸಿ ಸರಿ ದಾರಿಯಲ್ಲಿ ನಡೆಸುತ್ತದೆ ಎಂದು ಅವರು ನುಡಿದರು.

ಹೊಸಕಾಲದ ಕನ್ನಡ ಸಾಹಿತ್ಯದಲ್ಲಿ ವಿನೂತನ ಪ್ರಯೋಗಗಳಾಗುತ್ತಿವೆ. ಆದರೆ ಪರಂಪರೆಯನ್ನು ಉಳಿಸಿಕೊಳ್ಳುವ ಪ್ರಯತ್ನಗಳು ಕಡಿಮೆಯಿದೆ. ಭಾಷೆಯ ಅಭಿವೃದ್ಧಿಯ ದೃಷ್ಟಿಯಿಂದ ಶಾಸ್ತ್ರೀಯ ಅಧ್ಯಯನಗಳು ನಡೆಯಬೇಕು. ಛಂದಸ್ಸು, ಕಾವ್ಯಮೀಮಾಂಸೆ, ನಿಘಂಟು ಶಾಸ್ತ್ರ ಗ್ರಂಥ ಮತ್ತು ಹಸ್ತಪ್ರತಿಗಳ ಶಾಸ್ತ್ರೀಯ ಅಧ್ಯಯನದಿಂದ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಬಹುದು ಎಂದರು.

ಭಾಷೆಯನ್ನು ಹೊಸ ಸೃಷ್ಟಿಗಳಿಂದ ಪರಿಶೀಲಿಸಿ, ವಿಮರ್ಶಿಸಿಕೊಳ್ಳುವ ಮೂಲಕ ಸೊಗಸುಗೊಳಿಸಬಹುದು. ಆದರೆ ಭಾಷೆಯ ಸೊಗಸಿಗೆ ಹಾನಿ ಮಾಡಿ ಶ್ರೀಮಂತ ಪರಂಪರೆಯನ್ನು ಹಾಳುಗೆಡವುವ ಹಕ್ಕು ಯಾರಿಗೂ ಇಲ್ಲ.ಛಂದೋಬದ್ಧ ರಚನೆಗಳು ಅಪ್ರಸ್ತುತ ಎಂದು ಭಾವಿಸಬಾರದು.ವ್ಯಾಕರಣಬದ್ಧವಾದ ಕಾವ್ಯಗಳನ್ನು ಬರೆಯುವ ತಾಳ್ಮೆ, ಅಧ್ಯಯನಶೀಲತೆ ಉಳ್ಳವರು ಇಂದಿಗೂ ಇದ್ದಾರೆ. ಭಾಷೆಯ ಅಭಿವೃದ್ಧಿಗೆ ಇದು ಪೂರಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article