ಡಿ.22ರಂದು ಮಂಗಳೂರು ಸೈಕ್ಲಾಥಾನ್
ಮಂಗಳೂರು: ವಿ.ಆರ್. ಸೈಕ್ಲಿಂಗ್ ಕ್ಲಬ್ ವತಿಯಿಂದ ಡಿ.22ರಂದು ನಗರದಲ್ಲಿ ಕೆಆರ್‌ಒಎಸ್‌ಎಸ್ ಮಂಗಳೂರು ಸೈಕ್ಲಾಥಾನ್ ಎಂಬ ಸೈಕ್ಲಿಂಗ್ ಜಾಥಾ ಆಯೋಜಿಸಲಾಗಿದೆ.
ಅಂದು 7.15ಕ್ಕೆ ಮಂಗಳಾ ಕ್ರೀಡಾಂಗಣ ಬಳಿಯಿಂದ ಆರಂಭಗೊಳ್ಳುವ ಸೈಕ್ಲಿಂಗ್ ಜಾಥಾ ಬೆಳಗ್ಗೆ 8.30ಕ್ಕೆ ಬೋಳೂರು ಅಮೃತ ವಿದ್ಯಾಲಯ ಶಾಲಾ ಮೈದಾನದಲ್ಲಿ ಸಮಾಪನಗೊಳ್ಳಲಿದೆ. ಮಂಗಳಾ ಕ್ರೀಡಾಂಗಣ ಮುಂಭಾಗದಿಂದ ಹೊರಡುವ ಸೈಕ್ಲಿಂಗ್ ಜಾಥಾ ಶ್ರೀ ನಾರಾಯಣಗುರು ವೃತ್ತ, ಲಾಲ್ಭಾಗ್, ಜೈಲು ರಸ್ತೆ, ಕರಂಗಲಪಾಡಿ ಮಾರ್ಕೆಟ್, ಪಿವಿಎಸ್, ಬಳ್ಳಾಲ್ಭಾಗ್, ಮಣ್ಣಗುಡ್ಡ ಗುರ್ಜಿ, ಬರ್ಕೆ ಪೊಲೀಸ್ ಠಾಣೆ, ಮಹಾತ್ಮಾ ಗಾಂಧಿ ಉದ್ಯಾನ, ಉರ್ವ ಮಾರ್ಕೆಟ್ ಮೂಲಕ ಸಾಗಿ ಅಮೃತ ವಿದ್ಯಾಲಯಕ್ಕೆ ತಲುಪಲಿದೆ. ಒಟ್ಟು 6.5 ಕಿ.ಮೀ. ಸೈಕ್ಲಾಥಾನ್ ನಡೆಯಲಿದೆ. ಶಾಲಾ ಮಕ್ಕಳು ಮತ್ತು ಪೋಷಕರಲ್ಲಿ ಸೈಕ್ಲಿಂಗ್ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಸೈಕ್ಲಾಥಾನ್ ಆಯೋಜಿಸಲಾಗಿದೆ ಎಂದು ವಿ ಆರ್ ಸೈಕ್ಲಿಂಗ್ ಕ್ಲಬ್ ಅಧ್ಯಕ್ಷ ಸರ್ವೇಶ ಸಾಮಗ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಸೈಕ್ಲಥಾನ್ಗೆ ಚಾಲನೆ ನೀಡುವರು. ಕೆಆರ್‌ಒಎಸ್‌ಎಸ್ ಬೈಕ್ಸ್ ವಲಯ ಮುಖ್ಯಸ್ಥ ಆರ್.ಎಸ್. ಜಮ್ವಲ್, ಐಡಿಯಲ್ ಐಸ್ಕ್ರೀಂನ ಮುಕುಂದ ಕಾಮತ್, ಐಒಸಿಎಲ್ ವಿಭಾಗೀಯ ಮಾರಾಟ ಮುಖ್ಯಸ್ಥ ಯೋಗೇಶ್ ಪತಿದಾರ್, ಕಶರ್ಪ್ ಫಿಟ್ನೆಸ್ನ ಆನಂದ್ ಪ್ರಭು, ಗೃಹಿಣಿ ಮಸಾಲದ ಶಿವಾನಂದ ಮತ್ತು ಶುಭಾನಂದ ರಾವ್, ತಾಜ್ ಸೈಕಲ್ ಕಂಪೆನಿಯ ಎಂ.ಎಸ್. ಮುತಾಲಿಬ್ ಅತಿಥಿಯಾಗಿ ಭಾಗವಹಿಸುವರು ಎಂದರು.
ಸೈಕ್ಲಥಾನ್ ಮುಕ್ತಾಯಗೊಂಡ ಬಳಿಕ ಕಶರ್ಪ್ ಫಿಟ್ನೆಸ್ನಿಂದ ತಾಲೀಮು ನಡೆಯಲಿದೆ. ನೋಂದಾಯಿತ ಸಾರ್ವಜನಿಕರಿಗೆ ಲಕ್ಕಿ ಡ್ರಾ ಮೂಲಕ 2 ಮಕ್ಕಳ ಸೈಕಲ್ ಗೆಲ್ಲುವ ಅವಕಾಶವಿದೆ. ರಾಜ್ಯ ಮಟ್ಟದಲ್ಲಿ ಸೈಕ್ಲಿಂಗ್ನಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುವುದು. ಜಾಥಾದಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. www.wercycling.com ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದರು.
ಪ್ರಮುಖರಾದ ಹರ್ನೀಶ್ ರಾಜ್, ಅಶೋಕ್ ಲೋಬೊ, ಅಶ್ವಥ್, ರಾಮಪ್ರಸಾದ್ ನಾಯಕ್, ಮುಬೀನ್ ಉಪಸ್ಥಿತರಿದ್ದರು.