ವಿಚಾರಣಾಧೀನ ಕೈದಿ ಮೇಲೆ ಜೈಲಿನಲ್ಲೇ ಹಲ್ಲೆ: ಪೊಲೀಸರಿಗೆ ದೂರು
ಮಂಗಳೂರು: ಪೋಕ್ಸೋ ಪ್ರಕರಣದಲ್ಲಿ ಮಂಗಳೂರು ಜೈಲು ಸೇರಿದ ವಿಚಾರಣಾಧೀನ ಕೈದಿ ಮೇಲೆ ಜೈಲಿನಲ್ಲೇ ಸಹ ಕೈದಿಗಳು ಚಿತ್ರಹಿಂಸೆ ನೀಡಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾಧೀನ ಕೈದಿ, ವಿದ್ಯಾರ್ಥಿ ಸಫ್ವಾನ್ ಖಾನ್ ಬರ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಸಫ್ವಾನ್ನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ತಾನು ಪ್ರೀತಿಸುತ್ತಿದ್ದ ತನ್ನದೇ ಸಮುದಾಯದ ಯುವತಿಯ ಪೋಷಕರು ಇತರೆ ನಟೋರಿಯಸ್ ಕೈದಿಗಳಿಂದ ಚಿತ್ರಹಿಂಸೆ ಮಾಡಿಸಿದ್ದಾರೆ ಎಂದು ಹಲ್ಲೆಗೆ ಒಳಗಾದ ವಿದ್ಯಾರ್ಥಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾನೆ.
ಒಂದು ತಿಂಗಳ ಹಿಂದೆ ಬೆಳ್ತಂಗಡಿಯಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆಸಿದ ಬಗ್ಗೆ ಕಾಲೇಜು ವಿದ್ಯಾರ್ಥಿ ಸಫ್ವಾನ್ ಖಾನ್ ಮೇಲೆ ಪೋಕ್ಸೋ ಕೇಸು ದಾಖಲಿಸಲಾಗಿತ್ತು. ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿ ಸಫ್ವಾನ್ನನ್ನು ಮಂಗಳೂರಿನ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.
ಅ.21ರಂದು ಮಂಗಳೂರು ಜೈಲಿನಲ್ಲಿದ್ದ ವೇಳೆ ಆರೋಪಿ ವಿದ್ಯಾರ್ಥಿಗೆ ಸಹ ಕೈದಿಗಳು ಚಿತ್ರಹಿಂಸೆ ನೀಡಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ಆರೋಪಿಸಿದ್ದರು. ಆತನ ಊಟದ ತಟ್ಟೆ, ಚಮಚಾದಿಂದ ಥಳಿಸಿದ್ದು, ದಿನಪೂರ್ತಿ ಸಹ ಕೈದಿಗಳು ಹಲ್ಲೆ ನಡೆಸಿದ್ದಾರೆ. ಇದರಿಂದ ಕಂಗೆಟ್ಟುಹೋದ ಆತನ ಭೇಟಿಗೆ ಬಂದಿದ್ದ ತನ್ನ ತಂದೆಯಲ್ಲಿ ಈ ವಿಚಾರ ತಿಳಿಸಿದ್ದ. ಅಲ್ಲದೆ ತಕ್ಷಣವೇ ಜೈಲಿನಿಂದ ಬಿಡಿಸಿಕೊಂಡು ಹೋಗುವಂತೆ ಅಂಗಾಲಾಚಿದ್ದನು. ಕೊನೆಗೂ ವಾರದ ಹಿಂದೆ ಜಾಮೀನು ಪಡೆದು ಹೊರಬಂದ ಆತನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಬಗ್ಗೆ ಆತನ ತಂದೆ ಹಕೀಂ ಬೆಳ್ತಂಗಡಿ ಅವರು ಜೈಲಿನಲ್ಲಿ ಸಹ ಕೈದಿಗಳು ತನ್ನ ಪುತ್ರನಿಗೆ ಚಿತ್ರಹಿಂಸೆ ನೀಡಿರುವ ಬಗ್ಗೆ ಮಾಧ್ಯಮಗಳ ಮುಂದೆ ಆರೋಪಿಸಿದ್ದರು.
ಜೈಲಿನಲ್ಲಿದ್ದ ನನ್ನ ಪುತ್ರನಿಗೆ ಹಿಂಸೆ ನೀಡುವಂತೆ ಆತ ಪ್ರೀತಿಸುತ್ತಿದ್ದ ಯುವತಿಯ ಪೋಷಕರು ಸಹ ಕೈದಿಗಳಿಗೆ ಕುಮ್ಮಕ್ಕು ನೀಡಿದ್ದಾರೆ. ನನ್ನ ಪುತ್ರ ಯುವತಿಯನ್ನು ಬಲಾತ್ಕಾರ ಮಾಡಿಲ್ಲ, ಆದರೂ ಆತನ ವಿರುದ್ಧ ಪೋಕ್ಸೋ ಕೇಸು ದಾಖಲಿಸಲಾಗಿದೆ. ಆತನಿಗೆ ಜೈಲಿನಲ್ಲಿ ಹಿಂಸೆಯಾಗುವುದನ್ನು ತಪ್ಪಿಸಲು ಸಹ ಕೈದಿಗಳ ಕೋರಿಕೆ ಮೇರೆಗೆ ಹಣ ನೀಡುವಂತೆಯೂ ಬ್ಲ್ಯಾಕ್ಮೇಲ್ ಮಾಡಿದ್ದರು. ಹಣ ಪಡೆದ ನಂತರವೂ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಅ.28ರಂದು ಆತ ಗಂಭೀರ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಗುಪ್ತಾಂಗ, ಕಣ್ಣು, ಕಿವಿಗೆ ಏಟಾಗಿದ್ದು, ಎದೆನೋವಿನಿಂದ ಬಳಲುತ್ತಿದ್ದಾನೆ. ಆಗಾಗ ವಾಂತಿ ಕೂಡ ಮಾಡುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಡಿ.18ರಂದು ಜಾಮೀನಿನಲ್ಲಿ ಬಿಡುಗಡೆಯಾದರೂ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾನೆ. ಹೀಗಾಗಿ ಆತನ ಮೇಲೆ ಹಲ್ಲೆಗೆ ಕುಮ್ಮಕ್ಕು ನೀಡಿರುವ ಬಗ್ಗೆ ಹಾಗೂ ಸಹ ಕೈದಿಗಳು ಹಲ್ಲೆ ನಡೆಸಿರುವ ಕುರಿತಂತೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.