ಜವಾಬ್ದಾರಿ ಮತ್ತು ಕರ್ತವ್ಯಗಳ ಅರಿವಿದ್ದರೆ ಉತ್ತಮ ಶಿಕ್ಷಕರಾಗಬಹುದು: ಪ್ರೊ. ರಾಮೇಗೌಡ

ಜವಾಬ್ದಾರಿ ಮತ್ತು ಕರ್ತವ್ಯಗಳ ಅರಿವಿದ್ದರೆ ಉತ್ತಮ ಶಿಕ್ಷಕರಾಗಬಹುದು: ಪ್ರೊ. ರಾಮೇಗೌಡ


ಮಂಗಳೂರು: ನಮ್ಮ ವೃತ್ತಿ ಕ್ಷೇತ್ರದ ಜವಾಬ್ದಾರಿ ಮತ್ತು ಕರ್ತವ್ಯಗಳಿಗೆ ಸಂಬಂಧಿಸಿದ ನಿಯಮಗಳನ್ನು ವೃತ್ತಿಯ ಆರಂಭದಲ್ಲಿಯೇ ಅರಿತುಕೊಳ್ಳುವುದರ ಜೊತೆಗೆ ಅವುಗಳನ್ನು ನಿರಂತರವಾಗಿ ಪಾಲಿಸಿದರೆ ಉತ್ತಮ ಶಿಕ್ಷಕರಾಗಬಹುದು ಎಂದು ಕಾಲೇಜ ಶಿಕ್ಷಣ ಇಲಾಖೆಯ ಮಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಪ್ರೊ. ರಾಮೇಗೌಡ ಹೇಳಿದರು. 

ಅವರು ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ದ.ಕ., ಉಡುಪಿ ಮತ್ತು ಕೊಡಗು ಜಿಲ್ಲೆಗಳ ಸರಕಾರಿ ಪದವಿ ಕಾಲೇಜುಗಳಿಗೆ ನೂತನವಾಗಿ ನೇಮಕಾತಿಯಾದ ಸಹಾಯಕ ಪ್ರಾಧ್ಯಾಪಕರ ಸ್ವಾಗತ ಮತ್ತು ಒರಿಎಂಟೇಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಹಾಯಕ ಪ್ರಾಧ್ಯಾಪಕರ ಶೈಕ್ಷಣಿಕ ಜವಾಬ್ದಾರಿಗಳು, ವೃತ್ತಿ ಪದೋನ್ನತಿ ಮತ್ತು ಸೇವಾ ವಿಚಾರಗಳನ್ನು ನಿಯಂತ್ರಿಸುವ ಕರ್ನಾಟಕ ಸಿವಿಲ್ ಸೇವೆ ಮತ್ತೆ ನಡತೆ ನಿಯಮಗಳು, ಯುಜಿಸಿ ನಿಯಮಾವಳಿಗಳು ಮತ್ತು ವಿಶ್ವವಿದ್ಯಾನಿಲಯ ಕಾಯ್ದೆಗಳ ಬಗ್ಗೆ ನಂತರದ ತಾಂತ್ರಿಕ ಅಧಿವೇಶನಗಳಲ್ಲಿ ಪ್ರೊ. ರಾಮೇಗೌಡ, ಪ್ರೊ. ಜಯಕರ ಭಂಡಾರಿ ಮತ್ತು ಶೈಕ್ಷಣಿಕ ಸಂಯೋಜಕ ದೇವಿಪ್ರಸಾದ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.

ಕರ್ನಾಟಕ ಸರಕಾರದ ಕಾಲೇಜು ಶಿಕ್ಷಣ ಇಲಾಖೆಯಿಂದ ನೇಮಕಾತಿಗೊಂಡು ಮಂಗಳೂರು ಪ್ರಾದೇಶಿಕ ವಲಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯಕ್ಕೆ  ವರದಿ ಮಾಡಿಕೊಂಡಿರುವ ಸುಮಾರು 110 ಸಹಾಯಕ ಪ್ರಾಧ್ಯಾಪಕರು ಮತ್ತು 30ಕ್ಕೂ ಅಧಿಕ ಪ್ರಾಂಶುಪಾಲರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿಪ್ರಿಯ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಧ್ಯಾಪಕರಾದ ಡಾ. ಲೋಕೇಶ ನಾಥ್, ಡಾ. ಪುರುಷೋತ್ತಮ ಭಟ್, ಉಮಾ, ಜ್ಯೋತಿ ಸಹಕರಿಸಿದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article