ಕರಾವಳಿ ಉತ್ಸವ ಎಂಬುವುದು ವಿಶ್ವಗ್ರಾಮ ಪರಿಕಲ್ಪನೆ: ದಿನೇಶ್ ಗುಂಡೂರಾವ್
Saturday, December 21, 2024
ಮಂಗಳೂರು: ಕರಾವಳಿ ಉತ್ಸವ ಎಂಬುವುದು ವಿಶ್ವಗ್ರಾಮ ಪರಿಕಲ್ಪನೆಯಾಗಿದ್ದು, ಇಂತಹ ಕಾರ್ಯಕ್ರಮ ಆಯೋಜನೆಯಿಂದ ಕರಾವಳಿಯ ಸಂಸ್ಕೃತಿವ ಅನಾವರಣಕ್ಕೆ ಪ್ರಮುಖ ವೇದಿಕೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ದ.ಕ ಜಿಲ್ಲಾಡಳಿತ ಹಾಗೂ ವಿವಿಧ ಸಂಸ್ಥೆಗಳ ಸಹಕಾರದಲ್ಲಿ ಮಂಗಳೂರಿನಲ್ಲಿ ಜ. 19ರವರೆಗೆ ನಡೆಯಲಿರುವ ಕರಾವಳಿ ಉತ್ಸವವನ್ನು ಕರಾವಳಿ ಉತ್ಸವ ಮೈದಾನದ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ನಾಡೆಲ್ಲಾ ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆಯ ಗುಂಗಿನಲ್ಲಿರುವಂತೆಯೇ ಮಂಗಳೂರಿನಲ್ಲಿ ಗ್ಲೋಬಲ್ ವಿಲೆಜ್ (ಜಾಗತಿಕ ಹಳ್ಳಿ) ಪರಿಕಲ್ಪನೆಯಲ್ಲಿ ಮೂರು ವರ್ಷಗಳ ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ಜಿಲ್ಲೆಯಾಗಿದ್ದು, ಇಂತಹ ಸೌಹಾರ್ದತೆಯ ವಾತಾವರಣ ಬೇರೆಲ್ಲೂ ಸಿಗದು. ಇಲ್ಲಿ ಸೌಹಾರ್ದ ಮತ್ತು ಸಹೋದರತ್ವ ವಾತಾವರಣ ಬೆಳೆಸಲು ಸಹಾಯವಾಗಲಿದೆ. ಕಾರಣಾಂತರಗಳಿಂದ ಮೂರು ವರ್ಷಗಳಿಂದ ನಿಂತು ಹೋಗಿದ್ದ ಕರಾವಳಿ ಉತ್ಸವವನ್ನು ಈ ವರ್ಷದಿಂದ ಪುನರಾರಂಭಿಸಲಾಗಿದೆ. ಇಲ್ಲಿ ಇಂತಹ ಉತ್ಸವ, ಹಬ್ಬಗಳನ್ನು ಮಾಡಿದಾಗ, ತಮ್ಮ ಕಲೆ, ಪದ್ಧತಿ, ಆಚರಣೆಗಳನ್ನು ತೋರಿಸುವ ಅವಕಾಶವಾಗುತ್ತದೆ ಎಂದರು.
ಮೇಯರ್ ಮನೋಜ್ ಕುಮಾರ್ ಮಾತನಾಡಿ, ಕರಾವಳಿಯಲ್ಲಿ ಕೊಂಕಣಿ, ಅರೆಭಾಷೆ, ಬ್ಯಾರಿ, ಹವ್ಯಕ, ಕನ್ನಡ ಸೇರಿದಂತೆ ಹಲವಾರು ಭಾಷೆಗಳನ್ನು ಮಾತನಾಡುವವರಿದ್ದಾರೆ. ಜತೆಗೆ ತಮ್ಮದೇ ಆದ ಸಾಂಸ್ಕೃತಿಕ ಪಾರಂಪರಿಕ ಪದ್ಧತಿಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಸೌಹಾರ್ದಯುತ ವಾತಾವರಣವನ್ನು ಕಾಪಾಡಿಕೊಂಡಿದ್ದಾರೆ. ಎಲ್ಲಾ ಸಮುದಾಯಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಲವಾರು ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡಿದ್ದಾರೆ. ಕರಾವಳಿ ಉತ್ಸವದಂತಹ ಕಾರ್ಯಕ್ರಮಗಳು ಕರಾವಳಿ ಪ್ರವಾಸೋಧ್ಯಮಕ್ಕೆ ಪೂರಕವಾಗಲಿದೆ ಎಂದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ಜಿ.ಪಂ. ಸಿಇಒ ಡಾ. ಆನಂದ್, ಪಾಲಿಕೆ ಆಯುಕ್ತ ಆನಂದ್ ಸಿ.ಎಲ್., ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲವರಿಸ್, ಬ್ಯಾರಿ ಅಕಾಡಮಿ ಅಧ್ಯಕ್ಷ ಉಮರ್ ಯು. ಎಚ್., ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ಪಾಲಿಕೆ ವಿಪಕ್ಷ ನಾಯಕ ಅನಿಲ್ ಕುಮಾರ್, ಎಂ ಆರ್ ಪಿ ಎಲ್ ಎಂಡಿ ಶ್ಯಾಂ ಪ್ರಸಾದ್ ಕಾಮತ್, ಕ್ರೆಡೈ ಅಧ್ಯಕ್ಷ ವಿನೋದ್, ಕೆಸಿಸಿ ಐ ಅಧ್ಯಕ್ಷ ಆನಂದ್, ರೋಹನ್ ಕಾರ್ಪೊರೇಷನ್ ಮುಖ್ಯಸ್ಥ ರೋಹನ್ ಮೊಂತೆರೋ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ್ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯಮಟ್ಟದ ಒಲಿಂಪಿಕ್ಸ್ ಆಯೋಜನೆ:
ಕ್ರಿಸ್‌ಮಸ್, ಹೊಸವರ್ಷದ ಜತೆಗೆ ಇಲ್ಲಿ ರಾಜ್ಯ ಮಟ್ಟದ ಒಲಿಂಪಿಕ್ಸ್ ಮಂಗಳೂರಿನಲ್ಲಿ ಆಯೋಜಿಸಲಾಗಿದೆ. ವಿವಿಧ ಹಬ್ಬಗಳ ಆಚರಣೆಯ ಜತೆಗೆ ಇಲ್ಲಿನ ದೇವಸ್ಥಾನಗಳು ದೇಶದಲ್ಲೇ ಪ್ರಸಿದ್ಧಿಯನ್ನು ಪಡೆದಿವೆ. ಎಲ್ಲಾ ಭಾಗದಿಂದ ಇಲ್ಲಿಗೆ ಜನರು ಭೇಟಿ ನೀಡುವ ಪುಣ್ಯ ಹಾಗೂ ವೈಶಿಷ್ಟೃಮಯ ಭೂಮಿ. ಕ್ರೀಡಾ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಕರಾವಳಿ ಉತ್ಸವದ ರೀತಿಯಲ್ಲಿ ಸುಮಾರು ಒಂದು ತಿಂಗಳ ಕಾಲ ಜರಗಲಿದೆ. ಇದರಿಂದ ಕರಾವಳಿಯ ಸಂಸ್ಕೃತಿಗೆ ಪೂರಕವಾದ ಪ್ರವಾಸೋಧ್ಯಮ ಅಭಿವೃದ್ದಿಗೊಳ್ಳಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.







