‘ಆವಿಷ್ಕಾರ ಜಗತ್ತಿನ ಮೂಲಮಂತ್ರ’: ಬಿ.ಎನ್. ಸುರೇಶ್
ಮಂಗಳೂರು: ‘ಆವಿಷ್ಕಾರ ಎಂಬುದು ಇಂದಿನ ಜಗತ್ತಿನ ಮೂಲಮಂತ್ರ. ಆವಿಷ್ಕಾರದಲ್ಲಿ ತೊಡಗುವ ರಾಷ್ಟ್ರಗಳು ಮಾತ್ರ ಆಧುನಿಕ ಜಗತ್ತಿನಲ್ಲಿ ಅಸ್ತಿತ್ವ ಉಳಿಸಿಕೊಳ್ಳಬಲ್ಲವು. ಆವಿಷ್ಕಾರಕ್ಕೆ ಆದ್ಯತೆ ನೀಡದಿದ್ದರೆ ಅವಸಾನ ಕಟ್ಟಿಟ್ಟಬುತ್ತಿ’ ಎಂದು ತಿರುವನಂತಪುರದ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ (ಐಐಎಸ್ಟಿ) ಕುಲಾಧಿಪತಿ ಬಿ.ಎನ್. ಸುರೇಶ್ ಹೇಳಿದರು.
ಅಡ್ಯಾರ್ನ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಉದ್ಯಮಾಡಳಿತ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಪಾಯಕ್ಕೆ ಒಡ್ಡಿಕೊಳ್ಳುವುದು ಅನಿವಾರ್ಯ. ಸೋಲುಗಳನ್ನು ಸವಾಲಾಗಿ ಸ್ವೀಕರಿಸುವುದನ್ನು ಕಲಿಯಬೇಕು. ಆಗ ಸೋಲುಗಳೇ ಯಶಸ್ಸಿನ ಮೆಟ್ಟಿಲುಗಳಾಗಿ ಪರಿವರ್ತನೆಯಾಗುತ್ತವೆ’ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಸ್.ಇಜ್ಜಂಗೇರಿ ಅವರು ಆರೋಗ್ಯ ಸೇವೆ, ಪೂರೈಕೆ ಸರಪಣಿ, ಸರಕು ಸಾಗಣೆ, ಸ್ಮಾರ್ಟ್ ತಂತ್ರಜ್ಞಾನ, ಸುಸ್ಥಿರತೆ, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ, ನೀರು, ಕೃಷಿ, ಆಹಾರ ತಂತ್ರಜ್ಞಾನ, ವಿಪತ್ತು ನಿರ್ವಹಣೆ ಕ್ಷೇತ್ರಗಳಲ್ಲಿ ಪರಿಹಾರ ಕಂಡುಕೊಳ್ಳಬೇಕಾದ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.
ಹ್ಯಾಕಥಾನ್ನಲ್ಲಿ 27 ತಂಡಗಳು ಹಾಗೂ 162 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವರ್ಷ 54 ಸಚಿವಾಲಯಗಳು, ರಾಜ್ಯ ಸರ್ಕಾರ, ಸರ್ಕಾರಿ ಉದ್ದಿಮೆಗಳಿಗೆ ಸಂಬಂಧಪಟ್ಟ 250ಕ್ಕೂ ಹೆಚ್ಚು ಸಮಸ್ಯಾತ್ಮಕ ವಿಚಾರಗಳಿಗೆ ಪರಿಹಾರ ಕಂಡು ಹಿಡಿಯುವ ಸವಾಲನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು.