ತುರ್ತುಚಿಕಿತ್ಸಾ ಕೇಂದ್ರದಿಂದ ಕಕ್ಕಿಂಜೆ ಗ್ರಾಮದ ಜನತೆಗೆ ಪ್ರಯೋಜನ: ಡಾ. ತೇಜಸ್ವಿನಿ ಅನಂತ್ ಕುಮಾರ್
ಉಜಿರೆ: ಅತ್ಯಾಧುನಿಕ ತುರ್ತುಚಿಕಿತ್ಸಾ ಕೇಂದ್ರದಿಂದ ದೂರದ ಪ್ರದೇಶವಾದ ಕಕ್ಕಿಂಜೆ ಗ್ರಾಮವು ಈ 24X7 ತುರ್ತು ಸೇವೆಯಿಂದ ಪ್ರಯೋಜನ ಪಡೆಯಲಿದೆ ಎಂದು ಬೆಂಗಳೂರಿನ ಪ್ರಮುಖ ಸಮಾಜ ಸುಧಾರಕರು ಮತ್ತು ‘ಅದಮ್ಯ ಚೇತನ ಪ್ರತಿಷ್ಠಾನ’ದ ವ್ಯವಸ್ಥಾಪಕ ಟ್ರಸ್ಟಿ ಡಾ. ತೇಜಸ್ವಿನಿ ಅನಂತ್ ಕುಮಾರ್ ಹೇಳಿದರು.
ಡಿ.7 ರಂದು ಉಜಿರೆಯ ಚಿಕ್ಕಿಂಜೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅತ್ಯಾಧುನಿಕ ತುರ್ತುಚಿಕಿತ್ಸಾ ಕೇಂದ್ರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಗೀರ್ ಸಿದ್ದಿಕಿ ಮಾತನಾಡಿ, ನಮ್ಮ ವಿಶ್ವದರ್ಜೆಯ ತುರ್ತು ಸೇವೆಗಳನ್ನು ಕಕ್ಕಿಂಜೆಗೆ ತರಲು ನಾವು ಉತ್ಸುಕರಾಗಿದ್ದೇವೆ, ಈ ಪ್ರದೇಶದ ನಿವಾಸಿಗಳಿಗೆ ಸಮಯೋಚಿತ, ಜೀವ ಉಳಿಸುವ ವೈದ್ಯಕೀಯ ಆರೈಕೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುತ್ತೇವೆ. ಈ ಸೌಲಭ್ಯವು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಅತ್ಯಂತ ನುರಿತ ವೃತ್ತಿಪರ ವೈದ್ಯರ ತಂಡವನ್ನು ಹೊಂದಿದೆ. ನಾವು 24X7 ಅತ್ಯುನ್ನತ ಗುಣಮಟ್ಟದ ತುರ್ತು ಆರೈಕೆಯನ್ನು ಒದಗಿಸಲು ಬದ್ಧರಾಗಿದ್ದೇವೆ. ನಾವು ಇಲ್ಲಿ ಸೂಪರ್ ಸ್ಪೆಷಾಲಿಟಿ ಒಪಿಡಿ ಸೇವೆಗಳನ್ನು ಸಹ ಒದಗಿಸುತ್ತೇವೆ ಎಂದರು.
ಕೆಎಂಸಿ ಆಸ್ಪತ್ರೆಯ ತುರ್ತು ಔಷಧ ವಿಭಾಗದ ಮುಖ್ಯಸ್ಥ ಡಾ. ಜೀದು ರಾಧಾಕೃಷ್ಣನ್ ಮಾತನಾಡಿ, ಎಲ್ಲಾ ರೀತಿಯ ವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ಅತ್ಯಂತ ದಕ್ಷತೆ ಮತ್ತು ಕಾಳಜಿಯಿಂದ ನಿರ್ವಹಿಸುವ ರೀತಿಯಲ್ಲಿ ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆಯ ಕೆಎಂಸಿ ತುರ್ತು ಕೇಂದ್ರವನ್ನು ವಿನ್ಯಾಸಗೊಳಿಸಲಾಗಿದೆ. ಸಮುದಾಯಕ್ಕೆ ನಿರ್ಣಾಯಕ ಮಧ್ಯಸ್ಥಿಕೆಗಳನ್ನು ಒದಗಿಸಲು ಮತ್ತು ಆರೋಗ್ಯ ಸೇವೆಗಳನ್ನು ಸುಧಾರಿಸಲು ನಮ್ಮ ತಂಡ ಸಿದ್ಧವಾಗಿದೆ. ಈ ಹೊಸ ಸೌಲಭ್ಯವು ಈ ಪ್ರದೇಶದಲ್ಲಿನ ಆರೋಗ್ಯ ಸೇವೆಗಳ ಕೊರತೆಯನ್ನು ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪುತ್ತೂರಿನ ‘ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ’ ಮತ್ತು ಕೇರಳದ ಚೆರ್ವತ್ತೂರಿನ ‘ಕೆಎಎಚ್ಎಂ ಆಸ್ಪತ್ರೆ’ಯಲ್ಲಿ ಇಂತಹ ದೂರದ ತುರ್ತು ಕೇಂದ್ರಗಳಿವೆ ಈ ಉಪಕ್ರಮದಿಂದ ಅನೇಕ ಜೀವಗಳನ್ನು ಉಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ರೋಗಿಯು ಸರಿಯಾದ ಸಮಯದಲ್ಲಿ ತುರ್ತು ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾದಲ್ಲಿ, ಅಂತಹ ರೋಗಿಗೆ ಒಂದು ವೇಳೆ ಬೇರೆಡೆ ಸುಧಾರಿತ ವೈದ್ಯಕೀಯ ಆರೈಕೆಯ ಅಗತ್ಯವಿದ್ದಾಗ, ಅವರ ಪ್ರಾಣವನ್ನು ಉಳಿಸುವ ‘ಸುವರ್ಣ ಅವಧಿ’ಯನ್ನು(ಗೋಲ್ಡನ್ ಅವರ್) ಹೆಚ್ಚಿಸಲು ಇದರಿಂದ ಸಹಾಯಕವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಉಪಸಭಾಪತಿ ಎಂ.ಕೆ. ಪ್ರಾಣೇಶ್ ವಹಿಸಿ ಮಾತನಾಡಿ, ಸ್ಥಳೀಯ ಸಮುದಾಯಕ್ಕೆ ಈ ಹೊಸ ಸೌಲಭ್ಯದ ಮಹತ್ವವನ್ನು ಅವರು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ಕೆಆರ್ಡಿಪಿ ವಿಮಾ ಇಲಾಖೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ, ಸಂತ ಥಾಮಸ್ ಪ್ರೌಢಶಾಲೆ ನೆರಿಯಾ ಇದರ ಮುಖ್ಯ ಶಿಕ್ಷಕಿ ಥ್ರೇಸಿಯಾ ಕೆ.ಪಿ., ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಮುರಳೀಕೃಷ್ಣ ಇರ್ವತ್ತಾಯ ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ. ವಂದನಾ ಎಂ. ಇರ್ವತ್ರಾಯ ಮತ್ತಿತರರು ಉಪಸ್ಥಿತರಿದ್ದರು.
