
ದೇವಳದ ಇತಿಹಾಸ, ಕಾರಣಿಕ ಪ್ರಚುರಪಡಿಸುವಲ್ಲಿ ವೆಬ್ ಸೈಟ್ ಪಾತ್ರ ಹಿರಿದು: ಡಾ. ವೈ. ಭರತ್ ಶೆಟ್ಟಿ
Thursday, December 26, 2024
ಅದ್ಯಪಾಡಿ ಶ್ರೀ ಅದಿನಾಥೇಶ್ವರ ದೇವಳದ ವೆಬ್ ಸೈಟ್ ಲೋಕಾರ್ಪಣೆ
ಮಂಗಳೂರು: ಕರ್ನಾಟಕ ಸರಕಾರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಹಾಗೂ ಶ್ರೀ ಆದಿನಾಥೇಶ್ವರ ದೇವಸ್ಥಾನ ಅದ್ಯಪಾಡಿ ಜೀರ್ಣೋದ್ಧಾರ ಸಮಿತಿ ಇದರ ಸಹಯೋಗದೊಂದಿಗೆ ಶ್ರೀ ಆದಿನಾಥೇಶ್ವರ ದೇವಸ್ಥಾನದ ವೆಬ್‌ಸೈಟ್ ಅನಾವರಣ ಕಾರ್ಯಕ್ರಮವು ಗುರುವಾರ ಬೆಳಗ್ಗೆ ಶ್ರೀ ಕ್ಷೇತ್ರದ ಸಭಾಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಬಳಿಕ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು, ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭದಲ್ಲಿ ಅಧಿಕೃತ ವೆಬ್ ಸೈಟ್ ಇಂದು ಲೋಕಾರ್ಪಣೆಗೊಂಡಿದೆ. ಕ್ಷೇತ್ರದ ಸಾವಿರಾರು ವರ್ಷದ ಇತಿಹಾಸ, ಕಾರಣಿಕ, ವ್ಯವಸ್ಥೆ, ಪೂಜೆ ಮತ್ತು ಅದರ ಸಮಯವನ್ನು ಭಕ್ತರಿಗೆ ತಿಳಿಸುವ ನಿಟ್ಟಿನಲ್ಲಿ ವೆಬ್ ಸೈಟ್ ಕಾರ್ಯ ನಿರ್ವಹಿಸಲಿದೆ. ಇಂದಿನ ಕಾಲಘಟ್ಟದಲ್ಲಿ ಇದು ಅತ್ಯವಶ್ಯವೂ ಆಗಿದೆ. ಶ್ರೀ ಕ್ಷೇತ್ರದ ಬಗ್ಗೆ ಹೆಚ್ಚಿನ ಪ್ರಚಾರ ನೀಡುವಲ್ಲಿ ಮಾಧ್ಯಮಗಳ ಪಾತ್ರ ಹೆಚ್ಚಿನದ್ದು. ಕ್ಷೇತ್ರಕ್ಕೆ ಭಕ್ತರು ಆಗಮಿಸಿ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಂಡು ದೇವರ ಕೃಪೆಗೆ ಪಾತ್ರರಾಗಿ ಎಂದರು.
ದೇವಳದ ಪ್ರಧಾನ ಅರ್ಚಕ ಸದಾಶಿವ ಭಟ್ ಮಾತನಾಡಿ, ಆದಿನಾಥೇಶ್ವರ ಕ್ಷೇತ್ರದಲ್ಲಿ ಬ್ರಹ್ಮಕಳಶೋತ್ಸವ ಹಿನ್ನೆಲೆಯಲ್ಲಿ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ನಡೆಯುತ್ತಿದ್ದು ಎಲ್ಲವೂ ಭಗವದ್ಭಕ್ತರ ಸಹಕಾರದಿಂದ ಸಾಂಗವಾಗಿ ನೆರವೇರಲಿ. ದೇವಸ್ಥಾನ ಬೆಳಗಿದರೆ ಊರು ಬೆಳಗಿದಂತೆ ಎಂದು ಶಾಸ್ತ್ರ ಹೇಳುತ್ತದೆ. ದೇವಾಲಯದ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವ ಮೂಲಕ ಕ್ಷೇತ್ರಕ್ಕೆ ಬರುವ ಭಕ್ತರ ಇಷ್ಟಾರ್ಥ ಸಿದ್ಧಿಸಲಿ ಎಂದರು.
ವೇದಿಕೆಯಲ್ಲಿ ರಮೇಶ್ ಉಡುಪ ಪವಿತ್ರಪಾಣಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಏತಮೊಗರು ದೊಡ್ಡಮನೆ ಹರೀಶ್ ಶೆಟ್ಟಿ, ನವೀನ್ ಶೆಟ್ಟಿ ಎಡ್ಮೆಮಾರ್, ಸತೀಶ್ ಆಳ್ವ ಬೈಲು ಮೂಡುಕರೆ, ಲೀಲಾಕ್ಷ ಕರ್ಕೇರ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಜಿತ್ ಆಳ್ವ ಏತಮೊಗರು ಗುತ್ತು, ಬೈಲುಬೀಡು ಅಶ್ವಿನ್ ಬಳ್ಳಾಲ್, ಭುಜಂಗ ಕುಲಾಲ್ ಅದ್ಯಪಾಡಿ, ಶ್ರೀಧರ ಆಳ್ವ ಕಂದಾವರ ಬಾಳಿಕೆ, ರಮಾನಾಥ್ ಅತ್ತಾರ್, ರಾಜೀವ ಆಳ್ವ ಅದ್ಯಪಾಡಿ ಗುತ್ತು, ಶೆಡ್ಡೆ ಮಂಜುನಾಥ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.