
ಭ್ರಷ್ಟಾಚಾರ ಸರಿಪಡಿಸಬೇಕಾದರೆ ನ್ಯಾಯಾಂಗ ಮತ್ತು ಪತ್ರಿಕಾ ರಂಗ ಇನ್ನಷ್ಟು ಬಲಿಷ್ಠವಾಗಬೇಕು: ಜಸ್ಟೀಸ್ ಬಿ. ವೀರಪ್ಪ
ಮಂಗಳೂರು: ದೇಶದ ಎಲ್ಲ ರಂಗಗಳಲ್ಲೂ ಭ್ರಷ್ಟಾಚಾರ ಮಿತಿಮೀರಿದ್ದು, ಇದನ್ನು ಸರಿಪಡಿಸಬೇಕಾದರೆ ನ್ಯಾಯಾಂಗ ಮತ್ತು ಪತ್ರಿಕಾ ರಂಗ ಇನ್ನಷ್ಟು ಬಲಿಷ್ಠವಾಗಬೇಕು ಎಂದು ಉಪ ಲೋಕಾಯುಕ್ತ ಜಸ್ಟೀಸ್ ಬಿ. ವೀರಪ್ಪ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಭಾನುವಾರ ‘ಸಾರ್ವಜನಿಕ ಆಡಳಿತದಲ್ಲಿ ಲೋಕಾಯುಕ್ತ ಹಾಗೂ ಕಾನೂನು ಸೇವಾ ಪ್ರಾಧಿಕಾರಗಳ ಪಾತ್ರ’ ಕುರಿತು ಅವರು ಮಾತನಾಡಿದರು.
ಸರ್ಕಾರಿ ಆಸ್ಪತ್ರೆ ಸೇರಿದಂತೆ ಎಲ್ಲ ಬಗೆಯ ಸರ್ಕಾರಿ ಕಚೇರಿಗಳಲ್ಲಿ ಲೋಕಾಯುಕ್ತ ಸಂಪರ್ಕ ಸಂಖ್ಯೆಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಇದರಿಂದ ಜನತೆಯ ಶೋಷಣೆ ತಡೆಗಟ್ಟಬಹುದು ಮಾತ್ರವಲ್ಲ ಜನಸಾಮಾನ್ಯರಿಗೆ ಸುಲಭ ನ್ಯಾಯ ಸಿಗಲಿದೆ ಎಂದರು.
ಔಷಧಕ್ಕೆ ಹೊರಗೆ ಚೀಟಿ ಕೂಡದು:
ಸರ್ಕಾರಿ ಆಸ್ಪತ್ರೆಗಳಿಗೆ ಹೊರಗಿನಿಂದ ಔಷಧ ಖರೀದಿಗೆ ಪ್ರತಿದಿನಕ್ಕೆ 25 ಸಾವಿರ ರೂ. ವೆಚ್ಚ ಮಾಡಲು ಅವಕಾಶ ಇದೆ. ಆದರೆ ವೈದ್ಯರು ಹೊರಗಿನಿಂದ ಔಷಧ ಖರೀದಿಸುವಂತೆ ಬಡರೋಗಿಗಳಿಗೆ ಸೂಚಿಸುತ್ತಾರೆ. ಹಾಗಾದರೆ ಸರ್ಕಾರಿ ಆಸ್ಪತ್ರೆಯ ಉದ್ದೇಶ ಏನು ಎಂದು ಪ್ರಶ್ನಿಸಿದರು. ಯಾವುದೇ ಕಾರಣಕ್ಕೂ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹೊರಗೆ ಔಷಧ ಖರೀದಿಗೆ ಚೀಟಿ ನೀಡಲು ಅವಕಾಶ ಇಲ್ಲ. ಹಾಗೇನಾದರೂ ಕಂಡುಬಂದರೆ ಲೋಕಾಯುಕ್ತಕ್ಕೆ ದೂರು ನೀಡಬಹುದು ಎಂದರು.
ಸ್ವಯಂ ಆಗಿಯೂ ಕೇಸು ದಾಖಲಿಸಲು ಲೋಕಾಯುಕ್ತಕ್ಕೆ ಅವಕಾಶ ಇದೆ. ದಿಢೀರ್ ಕಾರ್ಯಾಚರಣೆ ಮೂಲಕ ಮಹತ್ವದ ಸಂಗತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಲೋಕಾಯುಕ್ತ ಕಾಯ್ದೆ ಬಳಸಿ ಮುಖ್ಯಮಂತ್ರಿಯನ್ನೇ ಜೈಲಿಗೆ ಕಳುಹಿಸಿದ ಉದಾಹರಣೆ ಕರ್ನಾಟಕದಲ್ಲಿದೆ. ಕರ್ನಾಟಕ ಲೋಕಾಯುಕ್ತ ದೇಶದಲ್ಲೇ ಬಲಿಷ್ಠವಾಗಿದೆ. ಲೋಕಾಯುಕ್ತ ಕೇವಲ ಕೇಸು ದಾಖಲು, ಕಾರ್ಯಾಚರಣೆ ಮಾತ್ರವಲ್ಲ, ಸಮಾಜಮುಖಿ ಸ್ಪಂದನ ಮಾಡುತ್ತಿದೆ ಎಂದು ಹೇಳಿದರು.
ಪ್ರತಿಯೊಬ್ಬರ ಸ್ವಾರ್ಥದಿಂದ ದೇಶ ಹಾಳಾಗುತ್ತಿದೆ. ಸ್ವಾತಂತ್ರ್ಯಾ ನಂತರವೂ ದೇಶದಲ್ಲಿ ಭ್ರಷ್ಟಾಚಾರ ಜಾಸ್ತಿಯಾಗುತ್ತಿದೆ. 130 ಕೋಟಿ ಜನಸಂಖ್ಯೆಯಲ್ಲಿ 10 ಕೋಟಿ ಮಂದಿಯೂ ಸರಿಯಾಗಿ ಜೀವನ ನಡೆಸುತ್ತಿಲ್ಲ. ಚುನಾವಣೆಯಲ್ಲಿ ದುಡ್ಡು ಪಡೆದುಕೊಂಡು ಮತ ಚಲಾಯಿಸುವ ಮಟ್ಟಕ್ಕೆ ತಲುಪಿದೆ. ಹಾಗಾದರೆ ರಾಜಾಕಾರಣಿಗಳಲ್ಲೂ ನೈತಿಕತೆ ಇಲ್ಲದಂತಾಗಿದೆ. ಹೀಗೆ ಎಲ್ಲ ಕಡೆಗಳಲ್ಲೂ ಹಾಸುಹೊಕ್ಕಾಗಿರುವ ಭ್ರಷ್ಟಾಚಾರದ ನಿರ್ಮೂಲನೆಗೆ ಪಣ ತೊಡಬೇಕು ಎಂದರು.
ಕಾನೂನು ಸೇವಾ ಪ್ರಾಧಿಕಾರಗಳು ಕಾನೂನು ಕಟ್ಲೆಗಳ ಇತ್ಯರ್ಥದ ಜೊತೆಗೆ ಹಳ್ಳಿಗಳಿಗೆ ತೆರಳಿ ಜನತೆಯ ಕಷ್ಟಸುಖ ಆಲಿಸಬೇಕು. ಅತ್ಯಾಚಾರದಂತಹ ಘಟನೆಗಳು ನಡೆದಾಗ ಹೆಣ್ಮಗುವಿನ ತಪ್ಪು ಇಲ್ಲದಿದ್ದರೂ ಆಕೆಯ ಜೊತೆ ಸಮಾಜ ಇದೆ ಎಂಬುದನ್ನು ತೋರಿಸಿಕೊಟ್ಟು ಧೈರ್ಯ ತುಂಬಬೇಕು ಎಂದು ಹೇಳಿದರು.
ಸುಳ್ಳು ಕೇಸುಗಳಿಗೆ ಜೈಲು ಶಿಕ್ಷೆ ವಿಧಿಸಿ:
ಲೋಕಾಯುಕ್ತ ಸೇರಿದಂತೆ ಎಲ್ಲ ಕೋರ್ಟ್‌ಗಳಲ್ಲೂ ಸುಳ್ಳು ದೂರುಗಳು ದಾಖಲಾಗುತ್ತಿರುವುದು ಗಮನಕ್ಕೆ ಬಂದಿದೆ. ಅಂತಹವರಿಗೆ ಜೈಲು ಶಿಕ್ಷೆ ವಿಧಿಸಬೇಕು ಎಂದು ಉಪ ಲೋಕಾಯುಕ್ತ ಜಸ್ಟೀಸ್ ಬಿ. ವೀರಪ್ಪ ಅಭಿಪ್ರಾಯಪಟ್ಟರು.
ಕರ್ನಾಟಕ ಲೋಕಾಯುಕ್ತದಲ್ಲಿ 20 ಸಾವಿರ ಕೇಸುಗಳ ಪೈಕಿ ಸುಮಾರು 8 ಸಾವಿರ ಸುಳ್ಳು ಕೇಸುಗಳು. ಇವುಗಳನ್ನು ವಾಪಸ್ ಪಡೆಯಲು ಅವಕಾಶ ನೀಡದೆ, ಸುಳ್ಳು ಕೇಸು ದಾಖಲಿಸುವವರಿಗೆ ಕನಿಷ್ಠ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ನಕಲಿ ಕೇಸು ತಡೆಗೆ ಕೇಸು ದಾಖಲಿಸುವ ವೇಳೆ ಆಧಾರ್ ಕಾರ್ಡ್ ಲಗತ್ತಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.
ದೇಶದಲ್ಲಿ ಸುಮಾರು 5 ಕೋಟಿ ಕೇಸುಗಳು ಇತ್ಯರ್ಥಕ್ಕೆ ಬಾಕಿ ಇದೆ. ಸುಪ್ರೀಂ ಕೋರ್ಟ್‌ನಲ್ಲಿ 70 ಸಾವಿರ ಕೇಸುಗಳು ಬಾಕಿ ಇದೆ. ನಾನು ಲೋಕಾಯುಕ್ತದಲ್ಲಿ ಅದಿ ಕಾರ ಸ್ವೀಕರಿಸಿದ ಬಳಿಕ 1.08 ಕೋಟಿ ಕೇಸುಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು.
ಶೇ.90ರಷ್ಟು ವಿದ್ಯಾವಂತರಿಂದಲೇ ಅಪರಾಧ!:
ದೇಶದಲ್ಲಿ ಈಗ ಶೇ.80ರಷ್ಟು ಸಾಕ್ಷರತೆ ಇದೆ. ಆದರೆ ಕೋರ್ಟ್ ಕೇಸುಗಳ ಪೈಕಿ ಶೇ.90ರಷ್ಟು ವಿದ್ಯಾವಂತರದ್ದು ಎಂಬುದು ಗಮನಾರ್ಹ. ಅದರಲ್ಲೂ ವಿದ್ಯಾವಂತರು ಕ್ರಿಮಿನಲ್, ಸಿವಿಲ್ ಮಾತ್ರವಲ್ಲ ಪೋಕ್ಸೋ ಕೇಸುಗಳಲ್ಲೂ ಭಾಗಿಯಾಗಿರುತ್ತಾರೆ. ಹೊಟ್ಟೆಪಾಡಿಗೆ ದುಡಿದು ಜೀವನ ಸಾಗಿಸುವ ಅವಿದ್ಯಾವಂತರು ಒಂದು ಕಡೆಯಾದರೆ, ಇನ್ನೊಂದೆಡೆ ಕಾನೂನು ಗೊತ್ತಿದ್ದೂ ಗೊತ್ತಿಲ್ಲದಂತೆ ವರ್ತಿಸುವ ವಿದ್ಯಾವಂತರೇ ಈ ಅಪರಾಧಗಳಲ್ಲಿ ತೊಡಗಿಸಿಕೊಳ್ಳುವುದು ಬೇಸರದ ಸಂಗತಿ. ಅಂತಹವರಿಗೆ ಜಾಮೀನು ಕೂಡ ನೀಡಬಾರದು ಎಂಬುದು ನನ್ನ ಸಲಹೆ ಎಂದು ಜಸ್ಟೀಸ್ ಬಿ.ವೀರಪ್ಪ ಹೇಳಿದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಎಂ. ಜೋಶಿ ಅಧ್ಯಕ್ಷತೆ ವಹಿಸಿದ್ದರು.
ಲೋಕಾಯುಕ್ತ ಅಪರ ನಿಬಂಧಕ ಕೆ.ಎಂ. ರಾಜಶೇಖರ್, ಉಪನಿಬಂಧಕರಾದ ಕೆ.ಎಂ. ಬಸವರಾಜಪ್ಪ, ಅರವಿಂದ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಶೋಭಾ ಬಿ.ಜಿ, ಜಿಲ್ಲಾ ಸತ್ರ ನ್ಯಾಯಾಧೀಶ ಮಲ್ಲಿಕಾರ್ಜನ ಸ್ವಾಮಿ, ಲೋಕಾಯುಕ್ತ ಎಸ್ಪಿ ನಟರಾಜದ ಎಂ.ಎ. ಇದ್ದರು.