
ಮಕ್ಕಳ ರಕ್ಷಣೆಯ ಕಾಯ್ದೆ ಕುರಿತು ಅರಿವು: ಸಿಇಒ ಡಾ. ಆನಂದ್
ಮಂಗಳೂರು: ಮಗು ತಾಯಿಯ ಗರ್ಭದಲ್ಲಿರುವಾಲೇ ಅದರ ಹಕ್ಕುಗಳು ಆರಂಭವಾಗುತ್ತವೆ. ಗರ್ಭ ಧರಿಸಿದ ತಾಯಿಯ ಚಿಕಿತ್ಸೆಯ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆಯಾದರೆ ಮುಂದೆ ಶಿಕ್ಷಣ ಸಂಸ್ಥೆಗಳ ಮೂಲಕ ಹಕ್ಕುಗಳ ರಕ್ಷಣೆಯಾಗಬೇಕು ಎಂದು ದ.ಕ. ಜಿ.ಪಂ. ಸಿಇಒ ಡಾ. ಆನಂದ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿ.ಪಂ. ಸಹಭಾಗಿತ್ವದಲ್ಲಿ ವಿವಿಧ ಇಲಾಖೆಗಳ ಸಹಕಾರದಲ್ಲಿ ದ.ಕ. ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಮಕ್ಕಳ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಕ್ಕಳ ರಕ್ಷಣೆಯ ಕಾಯ್ದೆ ಕುರಿತು ಅರಿವು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳ ಶಿಕ್ಷಣದ ಜತೆಗೆ ಮಕ್ಕಳ ಮಾನಸಿಕ, ಹದಿಹರೆಯದ ಸಮಸ್ಯೆಗಳ ಬಗ್ಗೆಯೂ ನಿಗಾ ವಹಿಸುವುದು ಮಕ್ಕಳ ಹಕ್ಕುಗಳ ರಕ್ಷಣೆಯಾಗಿದೆ ಎಂದವರು ಹೇಳಿದರು.
ಕಾರ್ಯಾಗಾರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ., ರಾಜ್ಯದಲ್ಲಿ ಭ್ರೂಣ ಹತ್ಯೆ ಹೆಚ್ಚುತ್ತಿದ್ದು, ಹೆಣ್ಣು ಮಗು ಬೇಡ ಎಂಬ ಕಾರಣವಾದರೆ, ಅದಕ್ಕಿಂತಲೂ ಹೆಚ್ಚಾಗಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಗರ್ಭಾವಸ್ಥೆಗೆ ತಲುಪಿರುವುದೂ ಸೇರಿದೆ. ಬಾಲ್ಯವಿವಾಹ, ಅಪೌಷ್ಟಿಕತೆ ಮೊದಲಾದ ಸಮಸ್ಯೆಗಳನ್ನು ನಾವು ಕಾಣುತ್ತಿದ್ದೇವೆ ಎಂದರು.
ಆಯೋಗವು ಈಗಾಗಲೇ 18 ಜಿಲ್ಲೆಗಳಿಗೆ ಭೇಟಿ ನೀಡಿದೆ. ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿ ದ.ಕ. ಜಿಲ್ಲೆಯು ಉತ್ತಮವಾಗಿದ್ದರೂ, ಕಳೆದ ಬಾರಿ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ನೋವಿನ ಅನುಭವ ಆಗಿತ್ತು. ಹಾಸ್ಟೆಲ್ ಒಂದಕ್ಕೆ ಭೇಟಿ ನೀಡಿದ್ದಾಗ ಅಧಿಕಾರಿಗಳ ಎದುರು ಅಲ್ಲಿದ್ದ 52 ಮಕ್ಕಳು ಮಾತನಾಡಲು ಹಿಂದೇಟು ಹಾಕಿದ್ದರು. ಅಧಿಕಾರಿಗಳ್ನು ಹೊರಗೆ ಕಳುಹಿಸಿ, ಸಮಸ್ಯೆಯನ್ನು ಬರೆದುಕೊಡಿ ಎಂದಾಗ, ನಮಗೆ ಹೊಟ್ಟೆ ತುಂಬಾ ಊಟ ಕೊಡಿ ಎಂದು ಹೆಚ್ಚಿನ ಮಕ್ಕಳು ಬರೆದಿದ್ದು ನೋಡಿ ಬೇಸರವಾಗಿತ್ತು. ಕೆಲವರು ಆಟವಾಡಲು ಬಿಡುತ್ತಿಲ್ಲ ಎಂಬ ದೂರು ನೀಡಿದ್ದು, ಆಟವಾಡುವುದು ಕೂಡ ಮಕ್ಕಳ ಹಕ್ಕಾಗಿದ್ದು, ಅದಕ್ಕೆ ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಹಾಸ್ಟೆಲ್‌ಗಳವರಿಗೆ ತರಬೇತಿ ನೀಡಬೇಕಾಗಿದೆ. ಹಾಸ್ಟೆಲ್ ಗಳಿಂದ ಮಕ್ಕಳ ನಾಪತ್ತೆ, ಆತ್ಮಹತ್ಯೆ ಪ್ರಕರಣ ಮೊದಲಾದ ಪ್ರಕರಣಗಳ ಬಗ್ಗೆ ಜಾಗೃತಿ ಅತೀ ಅಗತ್ಯವಾಗಿದ್ದು, 2016ರ ಮಕ್ಕಳ ರಕ್ಷಣಾ ನೀತಿ ಜಾರಿಗೆ ಬಂದಿದ್ದರೂ ಇನ್ನೂ ಅನುಷ್ಠಾನವಾಗದ ಬಗ್ಗೆ ಆತ್ಮವಿಮರ್ಶೆ ಆಗಬೇಕಾಗಿದೆ ಎಂದವರು ಹೇಳಿದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಡಿಸೋಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್ ಎ. ಮೊದಲಾದರು ಉಪಸ್ಥಿತರಿದ್ದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ ಕಾರ್ಯಕ್ರಮ ನಿರೂಪಿಸಿದರು.